ಸ್ಪೂರ್ತಿಯ ಚಿಲುಮೆ ಸ್ವಾಮಿ ವಿವೇಕಾನಂದರು

0
Spread the love

`ಎದ್ದೇಳು, ಎಚ್ಚರಗೊಳ್ಳು ಮತ್ತು ಗುರಿ ಸಾಧಿಸುವವರೆಗೂ ನಿಲ್ಲಬೇಡ’ ಎಂಬ ಸ್ವಾಮಿ ವಿವೇಕಾನಂದರ ನಾಣ್ಣುಡಿಯನ್ನು ಕೇಳಿರುತ್ತೇವೆ. ನಿಸ್ಸಂದೇಹವಾಗಿ ಸ್ವಾಮಿ ವಿವೇಕಾನಂದರ ಬೋಧನೆಗಳು ಯುವಕರನ್ನು ಮಾತ್ರವಲ್ಲ ಇಡೀ ಜಗತ್ತನ್ನು ಪ್ರೇರೇಪಿಸುತ್ತಿದ್ದ ನುಡಿಗಳಿವು. ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆ, ಭವ್ಯ ಭಾರತದ ಹೆಮ್ಮೆಯ ಪುತ್ರ, ಸ್ವಾಮಿ ವಿವೇಕಾನಂದರ ಜನ್ಮದಿನದ ಸವಿನೆನಪಿಗಾಗಿ ಜಜವರಿ 12ರಂದು ಭಾರತದಲ್ಲಿ `ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸಲಾಗುತ್ತದೆ.

Advertisement

ಸ್ವಾಮಿ ವಿವೇಕಾನಂದರು ಹಲವು ವೈವಿಧ್ಯತೆಗಳೊಂದಿಗೆ ಹೇಗೆ ಬದುಕಬೇಕು ಎಂದು ನಮಗೆ ಕಲಿಸಿದರು. ಪೂರ್ವ ಮತ್ತು ಪಶ್ಚಿಮದ ಸಂಸ್ಕೃತಿಯ ನಡುವೆ ವಾಸ್ತವ ಸೇತುವೆಯನ್ನು ನಿರ್ಮಿಸುವಲ್ಲಿ ಸ್ವಾಮಿ ವಿವೇಕಾನಂದರು ಯುವಕರಿಗೆ ದಾರಿದೀಪವಾದರು.

ಬಾಲ್ಯದಲ್ಲಿ ನರೇಂದ್ರನಾಥದತ್ತ ಎಂದು ಕರೆಯಲ್ಪಡುತ್ತಿದ್ದ ಸ್ವಾಮಿ ವಿವೇಕಾನಂದರು ಜನವರಿ 12, 1863ರಂದು ವಿಶ್ವನಾಥದತ್ತ ಮತ್ತು ಭುವನೇಶ್ವರಿದೇವಿ ದಂಪತಿಗಳಿಗೆ ಶ್ರೇಷ್ಠ ಕುವರನಾಗಿ ಕಲ್ಕತ್ತಾದಲ್ಲಿ ಜನಿಸಿದರು. ದತ್ತ ಕುಟುಂಬವು ಶ್ರೀಮಂತಿಕೆ ಮತ್ತು ಗೌರವ ಪ್ರತಿಷ್ಠೆಗಳನ್ನು ಗಳಿಸಿದ್ದು, ಔದಾರ್ಯ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದ್ದಿತು. ನರೇಂದ್ರ ಹುಟ್ಟುವ ಮುನ್ನ ಹೆಣ್ಣು ಮಕ್ಕಳಾಗಿದ್ದರೂ, ಅವರು ಗಂಡು ಮಗುವಿಗಾಗಿ ಹಾತೊರೆಯುತ್ತಿದ್ದರು. ಅದಕ್ಕಾಗಿ ವಾರಣಾಸಿಯಲ್ಲಿದ್ದ ತಮ್ಮ ಬಂಧುವೊಬ್ಬರಿಗೆ ವೀರೇಶ್ವರ ಶಿವನಿಗೆ ಪೂಜೆಯನ್ನು ಸಲ್ಲಿಸುವಂತೆ ಕೇಳಿಕೊಂಡರು.

ಕೆಲದಿನಗಳ ತರುವಾಯ ಶಿವ ಅವರ ಕನಸಿನಲ್ಲಿ ಕಾಣಿಸಿಕೊಂಡು ತಾನು ಅವರ ಮಗನಾಗಿ ಜನಿಸುವೆನೆಂದು ವಚನವಿತ್ತರು. ಆ ನಂತರವೇ ನರೇಂದ್ರನಾಥನ ಜನನವಾಯಿತು. ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬೆಳಕಿಗೆ ಬರುತ್ತದೆ ಎಂದು ಹೇಳುತ್ತಿದ್ದ ವಿವೇಕಾನಂದರು ಭಾರತದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ ಒಂದೇ ಪರಿಹಾರ ಎಂದು ನಂಬಿಕೆ ಇಟ್ಟಿರುವ ಮಹಾ ತಪಸ್ವಿ.

ಚೈನಾ, ಜಪಾನ್, ಕೆನಡಾ ದೇಶಗಳ ಮೂಲಕ ಸ್ವಾಮಿ ವಿವೇಕಾನಂದರು ಅಮೆರಿಕಾಗೆ ಪ್ರಯಾಣ ಬೆಳೆಸಿ, ಚಿಕ್ಯಾಗೋಗೆ ಸೆಪ್ಟೆಂಬರ್ 11, 1983ರಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದರು. ಜಗತ್ತಿನ ಪ್ರತಿಯೊಂದು ಕಡೆಯಿಂದಲೂ ಧರ್ಮದ ಪ್ರತಿನಿಧಿಗಳು ಬಂದು, ವೇದಿಕೆಯ ಮೇಲೆ ತಮ್ಮ ಧರ್ಮದ ಬಗ್ಗೆ ಮಂಡಿಸಿದ್ದರು. ಕಿತ್ತಳೆ ಬಣ್ಣದ ನೀಳ ಉಡುಪಿನ, ತೇಜೋಮಯ ಮುಖವುಳ್ಳ ಮಹಿಮಾತಿಶಯನ ಕಡುಸತ್ಯವಾದ ಸರಳ ನುಡಿಗಳ ರುಚಿ ಎಷ್ಟು ಮಹತ್ವದ್ದಾಗಿತ್ತೆಂದರೆ ಸರ್ವಧರ್ಮದ ಸಭೆಯ ಮಹಾನ್ ವ್ಯಕ್ತಿ ಎಂದು ಎಲ್ಲಾ ಪತ್ರಿಕೆಗಳೂ ಅಂದು ವಿವೇಕಾನಂದರನ್ನು ವರ್ಣಿಸಿದ್ದವು. ಭಿಕ್ಷೆಯ ಪಾತ್ರೆ ಹಿಡಿದಿದ್ದ ಓರ್ವ ಸಾಮಾನ್ಯ ಸನ್ಯಾಸಿ ಕ್ಷಣಾರ್ಧದಲ್ಲಿ ಶ್ರೇಷ್ಠ ವ್ಯಕ್ತಿ ಎನಿಸಿಕೊಂಡು, ಜಗತ್ಪçಸಿದ್ಧರಾದರು.

ವಿವೇಕಾನಂದರ ಜನ್ಮ ದಿನವನ್ನು 1984ರಿಂದ ರಾಷ್ಟ್ರೀಯ ಯುವ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಸಿದ್ದಾಂತಗಳು ಅವರ ಆದರ್ಶಗಳು ಯುವಕರಿಗೆ ಸದಾ ಪ್ರೇರಣಾದಾಯಕವಾಗಿವೆ. ಯುವಕರ ಬಗ್ಗೆ ಅವರಿಗಿದ್ದ ವಿಶ್ವಾಸದಿಂದ ಅವರ ಈ ಜಯಂತಿಯನ್ನು ರಾಷ್ಟ್ರೀಯ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಯುವ ಜನತೆ ಮನೆಯಲ್ಲಿ ತಂದೆ-ತಾಯಿ ಮಾತು ಕೇಳದೇ ತಮಗೆ ಬೇಕಾದ ಹಾಗೆ ಮೊಬೈಲ್‌ನಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಯುವಕರ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಜಾಲತಾಣಗಳು ಪರಿಣಾಮ ಬೀರುತ್ತಿವೆ ಎಂದು ಸಂಶೋಧನೆಯ ವರದಿ ಎಚ್ಚರಿಸಿದೆ. ಉಳಿದ ವಯಸ್ಸಿನ ಗುಂಪಿನ ಜನರಿಗಿಂತ ಶೇ.90ರಷ್ಟು ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ.

ಯುವ ಜನತೆಯ ವಿಷಯದಲ್ಲಿ ನಡೆದ ಒಂದು ಸಂಶೋಧನೆಯಲ್ಲಿ ಇಂದು ಸಾಮಾಜಿಕ ಜಾಲತಾಣಗಳು ಯುವಕರ ಮತ್ತು ಯುವತಿಯರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿವೆ ಎಂದರೆ ಅರ್ಧ ರಾತ್ರಿಯಲ್ಲಿ ನಿದ್ರೆಯಲ್ಲಿ ಎದ್ದು ತಾವು ಹಾಕಿರುವ ಪೋಸ್ಟ್ಗೆ ಬಂದಿರುವ ಕಾಮೆಂಟ್ಸ್ ಮತ್ತು ಲೈಕ್ಸ್ಗಳನ್ನು ನೋಡಿ ಅವುಗಳಿಗೆ ಪ್ರತಿಕ್ರಿಯೆ ನೀಡುವ ಸಲುವಾಗಿ ತಮ್ಮ ಇಡೀ ರಾತ್ರಿಯ ನಿದ್ರೆಯನ್ನು ಹಾಳು ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಇದರಿಂದ ನಿದ್ರೆಯ ಗುಣಮಟ್ಟ ಕಡಿಮೆ ಆಗುವುದರ ಜೊತೆಗೆ ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗಿ ಕೆಟ್ಟ ಆರೋಗ್ಯ ಸಮಸ್ಯೆಗಳಾದ ಮಾನಸಿಕ ಖಿನ್ನತೆ, ಬೊಜ್ಜು ಇತ್ಯಾದಿಗಳು ಎದುರಾಗುತ್ತದೆ. ಇವುಗಳಿಗೆ ಪರಿಹಾರ ಒಂದೇ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ದಾರಿಯಲ್ಲಿ ನಡೆದುಕೊಂಡು ಹೋಗುವುದು.

ಒಟ್ಟಾರೆಯಾಗಿ ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ, ಅಪೂರ್ವ ವಾಗ್ಮೀಯತೆ ಹಾಗೂ ಪ್ರಚೋದನಾತ್ಮಕ ಬರವಣಿಗೆ ಮೂಲಕ ನಮ್ಮ ರಾಷ್ಟ್ರ ಚೇತನವನ್ನು ಜಾಗೃತಗೊಳಿಸಿ, ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಕುದುರಿಸಿ ಸ್ವತಂತ್ರ ಭವ್ಯ ಭಾರತದ ಕನಸನ್ನು ಕಂಡಿದ್ದ ಸ್ವಾಮಿ ವಿವೇಕಾನಂದರು ಯುವಕರ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯನ್ನು ಹಾಕಿದರು.

– ಬಸವರಾಜ ಎಮ್.ಯರಗುಪ್ಪಿ.

ಬಿಆರ್‌ಪಿ, ಶಿರಹಟ್ಟಿ- ಲಕ್ಮೇಶ್ವರ


Spread the love

LEAVE A REPLY

Please enter your comment!
Please enter your name here