ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ!

0
Spread the love

ಬೆಂಗಳೂರು:- ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ.

Advertisement

ವೈದ್ಯಕೀಯ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಸಂಜೀವಿನಿ ಯೋಜನೆ ಜಾರಿವರೆಗೂ ಮಾಸಿಕ 200 ರೂಪಾಯಿಂದ 500 ರೂ.ಗೆ ಹೆಚ್ಚಿಸಿ ಆದೇಶಿಸಿದೆ.

ಈ ಬಗ್ಗೆ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರದ ನೀತಿ ನಿರ್ಣಯದಂತೆ 05-09-2022ರ ಸರ್ಕಾರಿ ಆದೇಶದಲ್ಲಿ ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಅದರಂತೆ, ಸರ್ಕಾರದ ನೀತಿಯಲ್ಲಿ ವಿವರಿಸಿರುವಂತೆ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಸ್ತೃತವಾದ ಮಾರ್ಗಸೂಚಿಗಳನ್ನು ಸಹ ಹೊರಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ದಿನಾಂಕ 22-07-2024ರ ಸರ್ಕಾರಿ ಆದೇಶದಲ್ಲಿ ವೇತನ ಶ್ರೇಣಿಗಳ ಮತ್ತು ವೇತನಕ್ಕೆ ಹೊಂದಿಕೊಂಡಿರುವ ನಿರ್ದಿಷ್ಟ ಭತ್ಯೆಗಳ ಪರಿಷ್ಕರಣೆ ಮತ್ತು ಪಿಂಚಣಿ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಅದರಂತೆ ದಿನಾಂಕ 23-08-2024ರ ಸರ್ಕಾರಿ ಆದೇಶದಲ್ಲಿ ಪರಿಷ್ಕೃತ ವೇತನ ಶ್ರೇಣಿಗಳನ್ನು ಅನುಷ್ಠಾನಗೊಳಿಸಿ ವಿಸ್ತೃತವಾದ ಆದೇಶಗಳನ್ನು ಹೊರಡಿಸಲಾಗಿರುತ್ತದೆ.

ಗ್ರೂಪ್ -ಸಿ ಮತ್ತು ಗ್ರೂಪ್-ಡಿ ವೃಂದದ ರಾಜ್ಯ ಸರ್ಕಾರಿ ನೌಕರರುಗಳಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆ ದರಗಳ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಸರ್ಕಾರವು ಅಂಗೀಕರಿಸಿರುತ್ತದೆ. ಅದರಂತೆ ಈ ಕೆಳಕಂಡ ಆದೇಶವನ್ನು ಹೊರಡಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಗ್ರೂಪ್-‘ಸಿ’ ಮತ್ತು ಗ್ರೂಪ್-‘ಡಿ’ ವೃಂದದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆಯ ದರಗಳನ್ನು ಮಾಸಿಕ ರೂ.200/- ಗಳಿಂದ ಮಾಸಿಕ ರೂ.500/- ಗಳಿಗೆ 1ನೇ ಆಗಸ್ಟ್ 2024ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲು ಸರ್ಕಾರವು ಹರ್ಷಿಸುತ್ತದೆ.
ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ (ಕೆ.ಎ.ಎಸ್.ಎಸ್) ಸೌಲಭ್ಯವು ಅನುಷ್ಠಾನಗೊಳ್ಳುವವರೆಗೆ ಈ ವೈದ್ಯಕೀಯ ಸೌಲಭ್ಯವು ಲಭ್ಯವಿರುತ್ತದೆ.

ನಗದುರಹಿತ ವೈದ್ಯಕೀಯ ಸೌಲಭ್ಯ ಯೋಜನೆಯು ಅನುಷ್ಠಾನಗೊಂಡ ನಂತರದಲ್ಲಿ ವೈದ್ಯಕೀಯ ಭತ್ಯೆಯ ಮಂಜೂರಾತಿಯ ಈ ಆದೇಶವು ಜಾರಿಯಲ್ಲಿರುವುದು ಕೊನೆಗೊಳ್ಳುತ್ತದೆ ಮತ್ತು ನಗದುರಹಿತ (ಕೆ.ಎ.ಎಸ್.ಎಸ್) ಯೋಜನೆಯು ಅನುಷ್ಠಾನಗೊಂಡ ಬಳಿಕ ಯಾವುದೇ ಸರ್ಕಾರಿ ನೌಕರನು ಈ ಸೌಲಭ್ಯವನ್ನು ಪಡೆಯಲು ಅರ್ಹನಿರುವುದಿಲ್ಲ.

ಈ ಭತ್ಯೆಯನ್ನು ಕ್ರಮಬದ್ಧಗೊಳಿಸಲು ವಿಧಿಸಿರುವ ಇತರೆ ಷರತ್ತುಗಳು ಮುಂದುವರೆದು ಅನ್ವಯಿಸುತ್ತವೆ ಎಂದು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here