ವಿಜಯಸಾಕ್ಷಿ ಸುದ್ದಿ, ಗದಗ : ಹುಬ್ಬಳ್ಳಿಯಲ್ಲಿ 2022ರಲ್ಲಿ ನಡೆದ ಪೊಲೀಸರ ಮೇಲಿನ ಕಲ್ಲು ತೂರಾಟ ಪ್ರಕರಣವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂಪಡೆದಿದ್ದು, ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಕೂಡಲೇ ಇಂತಹ ರಾಜಕಾರಣ ಕೈ ಬಿಡಬೇಕು. ಇಲ್ಲವಾದಲ್ಲಿ ಸರ್ಕಾರದ ನಿರ್ಧಾರದ ವಿರುದ್ಧ ನಾವು ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲೂ ಅಮಾಯರಿದ್ದಾರೆ ಅಂದಿದ್ದಾರೆ. ಜಮೀರ್ ಅಹ್ಮದ್ ಗೃಹ ಸಚಿವರಿಗೆ ಪತ್ರ ಬರೆದು ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ ಗಲಭೆ ಕೇಸ್ ವಾಪಾಸ್ ಪಡೆಯಬೇಕೆಂದು ಕೇಳಿಕೊಂಡಿದ್ದರು. ಅದಾದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಗೃಹ ಮಂತ್ರಿಗಳು ಹೇಳುತ್ತಾರೆ. ರಾಜ್ಯದ ಸುರಕ್ಷತೆಯ ಬಗ್ಗೆ ಗೃಹ ಮಂತ್ರಿಗಳಿಗೆ ಕಳಕಳಿ ಇದ್ದರೆ ಪ್ರಕರಣವನ್ನು ತಕ್ಷಣ ವಿಲೇವಾರಿಗೆ ಹಾಕಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿ ಬೇಲ್ ತಿರಸ್ಕೃತವಾಯಿತು. ಸರ್ಕಾರಿ ವಕೀಲರನ್ನೂ ಬದಲಾಯಿಸಲಾಯಿತು. ಇದೀಗ, ಬೇಲ್ ಕೊಟ್ಟು ಎರಡು ತಿಂಗಳಲ್ಲಿ ಕೇಸ್ ಹಿಂಪಡೆಯುತ್ತಾರೆ ಎಂದು ಹೇಳಿದರು.
ಅಂದಿನ ಪೊಲೀಸ್ ಅಧಿಕಾರಿಗಳು ಯೋಚನೆ ಮಾಡಿಯೇ ಪ್ರಕರಣ ದಾಖಲಿಸಿದ್ದರು. ಸ್ವಲ್ಪ ಮೈ ಮರೆತಿದ್ದರೆ ನಮ್ಮ ಕೊಲೆಯಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೇ ಹೇಳಿದ್ದರು. ಆ ಅಧಿಕಾರಿಯ ಹೆಸರು ಹೇಳಿದರೆ ಕಾಂಗ್ರೆಸ್ ಸೇಡಿನ ಕ್ರಮ ಕೈಗೊಳ್ಳುತ್ತದೆ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ರಾಜು ಕಾಗೆ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ ರಾಯರೆಡ್ಡಿ, ಜಾರಕಿಹೊಳಿ ಸೇರಿದಂತೆ ಹಲವರು ಮಾತನಾಡಿದ್ದರು. ಮೊನ್ನೆ ಬಿ.ಆರ್. ಪಾಟೀಲ್ ಈ ಸರ್ಕಾರದಲ್ಲಿ ಅಧಿಕಾರಿಗಳಿಗೆ ಸೊಕ್ಕು ಜಾಸ್ತಿಯಾಗಿದೆ ಎಂದಿದ್ದಾರೆ. ಮಳೆಯಾಗಿ ರಸ್ತೆ ಹದಗೆಟ್ಟಿವೆ, ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ವೃದ್ಧಾಪ್ಯ ವೇತನ, ವಿಧವಾ ವೇತನದ ಹಣ ಸಿಗುತ್ತಿಲ್ಲ. ಒಂದು ರೀತಿಯಲ್ಲಿ ಸರ್ಕಾರ ದಿವಾಳಿಯ ಹಂತಕ್ಕೆ ಹೋಗುತ್ತಿದೆ. ಹಿಮಾಚಲ, ಪಂಜಾಬ್, ರಾಜ್ಯಗಳಲ್ಲಿ ಅದೇ ಪರಿಸ್ಥಿತಿಯಾಗಿದೆ. ಬೇರೆ ಬೇರೆ ರಾಜ್ಯದ ಮಂತ್ರಿಗಳ ಜೊತೆಗೆ ವಯಕ್ತಿಕವಾಗಿ ಮಾತನಾಡುವಾಗ, ಉಚಿತ ಯೋಜನೆಯಿಂದ ಈ ರೀತಿಯಾಗಿದೆ ಎಂದು ಕೆಲವರು ಅನೌಪಚಾರಿಕವಾಗಿ ಹೇಳಿದ್ದಾರೆ.
ಗ್ಯಾರಂಟಿ ಯೋಜನೆ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ರಾಜ್ಯ ಒಂದು ವರ್ಷದಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದೆ. ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ. ಪರಿಸ್ಥಿತಿ ಇನ್ನೂ ಗಂಭೀರವಾಗಿದ್ದು, ಇದರ ಪರಿಣಾಮ ಸಂಪೂರ್ಣ ರಾಜ್ಯದ ಮೇಲೆ ಆಗಲಿದೆ ಎಂದರು.
ದಸರಾ ಹಬ್ಬದ ಜಾಹೀರಾತು ವಿಷಯವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಹ್ಲಾದ ಜೋಶಿ, ಈ ವಿಚಾರದಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸಿತು ಎನ್ನುವ ಹಾಗೆ ಹೈ ಕಮಾಂಡನ್ನೇ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ನನಗಿರುವ ಮಾಹಿತಿಯ ಪ್ರಕಾರ, ನೀವು ಸುಮ್ಮನಾಗಿಸದಿದ್ದಲ್ಲಿ ನಾನು ಸುಮ್ಮನಿರುವುದಿಲ್ಲ ಎಂದು ಸಿಎಂ ಬೆದರಿಕೆ ಒಡ್ಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಎಮ್.ಎಮ್. ಹಿರೇಮಠ, ಸಿದ್ದು ಪಲ್ಲೇದ, ಎಂ.ಎಸ್. ಕರಿಗೌಡ್ರ, ಕೋಟಿಗೌಡ್ರ ಮುಂತಾದವರಿದ್ದರು.
ಕೋವಿಡ್ ಸಂದರ್ಭದಲ್ಲಿ ನಡೆದ ಅಕ್ರಮ ಪ್ರಕರಣವನ್ನು ಎಸ್‌ಐಟಿಗೆ ವಹಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ಬೆದರಿಕೆಯ ತಂತ್ರಕ್ಕೆ ನಾವು ಹೆದರುವುದಿಲ್ಲ. ಬಿಜೆಪಿ ಹೋರಾಟದ ಮೂಲಕ ಸಂಘಟನೆ ಮಾಡಿಕೊಂಡು ಬಂದಿದೆ. ಒಂದುವರೆ ವರ್ಷದಿಂದ ಯಾರೂ ತನಿಖೆ ಮಾಡಬೇಡಿ ಎಂದವರು, ಈಗ ಸಿದ್ದರಾಮಯ್ಯ ಪ್ರಕರಣ ಹೊರ ಬಂದಮೇಲೆ ಈಗ ಶುರು ಮಾಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪನವರ ವಿಚಾರ ಎತ್ತಿದರು. ಯಡಿಯೂರಪ್ಪನರ ಪ್ರಕರಣಕ್ಕೆ ಸಂಬAಧಿಸಿ, ದೂರುದಾರರ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದಿದ್ದರು. ಈಗ ಯಾಕೆ ಅದನ್ನೇ ಗಂಭೀರವಾಗಿ ಪ್ರಸ್ತಾಪ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.