HomeGadag News`ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ’: ಶಾಸಕ ಸಿ.ಸಿ. ಪಾಟೀಲ

`ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ’: ಶಾಸಕ ಸಿ.ಸಿ. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅವರೆಲ್ಲರ ಮೆಚ್ಚುಗೆ ಪಡೆಯುವ ಏಕೈಕ ಉದ್ದೇಶದಿಂದ ರಾಜ್ಯ ಸರ್ಕಾರ ತರಾತುರಿಯಲ್ಲಿ ವಿಜಯೋತ್ಸವ ಆಯೋಜಿಸಿ ಅಮಾಯಕರ ಜೀವ ಬಲಿ ಪಡೆದಿದೆ. ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಶಾಸಕ ಸಿ.ಸಿ. ಪಾಟೀಲ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಗೆ ನೋಡಿದರೆ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸುವ ಅಗತ್ಯವೇ ಇರಲಿಲ್ಲ. ಆರ್‌ಸಿಬಿ ತಂಡವೇನು ದೇಶಕ್ಕಾಗಿ ಪಂದ್ಯ ಆಡಿಲ್ಲ. ಐಪಿಎಲ್ ಅಂದರೆ ದುಡ್ಡು ಮಾತ್ರ. ಅದರಲ್ಲಿ ಭಾಗವಹಿಸುವ ಆಟಗಾರರು ಕೋಟ್ಯಂತ ರೂಪಾಯಿಗೆ ಹರಾಜಾಗಿರುತ್ತಾರೆ. ವೈಯಕ್ತಿಕ ಲಾಭಕ್ಕಾಗಿ ಆಡಿ ಗೆದ್ದವರನ್ನು ಅಭಿನಂದಿಸುವ ಜರೂರು ಏನಿತ್ತು ಎಂದು ಅವರು ಪ್ರಶ್ನಿಸಿದರು.

ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಬೇಡಿ ಎಂದು ಯಾವ ಅಧಿಕಾರಿಗಳೂ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿದ್ದರೆ ಈ ಘಟನೆಗೆ ಯಾರು ಹೊಣೆ? ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದಾಗ ಗುಪ್ತಚರ ಇಲಾಖೆ ವೈಫಲ್ಯದಿಂದ ಇಷ್ಟೆಲ್ಲಾ ಆಯಿತು ಎಂದು ಕಾಂಗ್ರೆಸ್ ಮುಖಂಡರು ಬಾಯಿ ಬಡಿದುಕೊಂಡರು. ‘ಪುಷ್ಪ–2’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಥಿಯೇಟರ್‌ನಲ್ಲಿ ನೂಕುನುಗ್ಗಲಾಗಿ ಅಭಿಮಾನಿಯೊಬ್ಬ ಸತ್ತಾಗ ಇವರದ್ದೇ ಸರ್ಕಾರ ನಟ ಅಲ್ಲು ಅರ್ಜುನ್ ಅವರನ್ನು ಜೈಲಿಗಟ್ಟಿತು. ಈಗ ಯಾವುದೇ ಪೂರ್ವ ತಯಾರಿ ಇಲ್ಲದೇ ಮಾಡಿದ ಕಾರ್ಯಕ್ರಮದಿಂದ 11 ಮಂದಿ ಸತ್ತಿದ್ದಾರೆ. ಇದಕ್ಕೆ ಯಾರನ್ನು ಜೈಲಿಗೆ ಹಾಕುತ್ತೀರಿ ಎಂದು ಪ್ರಶ್ನಿಸಿದರು.

ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಿದರೆ ಸಾಲದು. ಅವಕಾಶ ಇದ್ದಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಬೇಕು. ಇಲ್ಲವಾದರೆ, ಸಿಬಿಐಗೆ ವಹಿಸಬೇಕು. ಆರ್‌ಸಿಬಿ ತಂಡದ ಬಳಿ ಹಣಕ್ಕೇನೂ ಕೊರತೆ ಇಲ್ಲ. ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 50 ಲಕ್ಷ ರೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರಶಾಂತ ನಾಯ್ಕರ, ಎಂ.ಎಸ್. ಕರಿಗೌಡ್ರ, ವಿನಾಯಕ ಮಾನ್ವಿ, ರಾಘವೇಂದ್ರ ಯಳವತ್ತಿ, ಸಿದ್ದು ಪಲ್ಲೇದ, ಉಷಾ ದಾಸರ, ವಿಜಯಲಕ್ಷ್ಮೀ ಮಾನ್ವಿ, ಎಂ.ಎಂ. ಹಿರೇಮಠ ಇದ್ದರು.

ಆರ್‌ಸಿಬಿ ತಂಡದ ಆಟಗಾರರನ್ನು ಅಭಿನಂದಿಸಲು ಬಂದ ಅಭಿಮಾನಿಗಳ ಪೈಕಿ ಕಾಲ್ತುಳಿತಕ್ಕೆ ಸಿಕ್ಕು 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಆರ್‌ಸಿಬಿ ಆಟಗಾರರಿಗೆ ಈ ಬಗ್ಗೆ ಕಿಂಚಿತ್ತೂ ನೋವು, ಆಘಾತ ಆದಂತೆ ಕಾಣಿಸಿಲ್ಲ. ಕನಿಷ್ಠ ಪಕ್ಷ 11 ಮಂದಿ ಅಭಿಮಾನಿಗಳ ಆತ್ಮಕ್ಕೆ ಶಾಂತಿ ಕೋರಿ ಮೇಣದಬತ್ತಿ ಹಚ್ಚಿ ವಿಷಾದವನ್ನೂ ವ್ಯಕ್ತಪಡಿಸಿಲ್ಲ ಎಂದು ಶಾಸಕ ಸಿ.ಸಿ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!