ರಾಜ್ಯ ಸರ್ಕಾರ ಬಡವರ ರಕ್ತ ಹೀರುತ್ತಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮುಕ್ತ ಮಾರುಕಟ್ಟೆ ಬೆಲೆಗಳಿಗಿಂತ ಶೇ. 50ರಿಂದ 90ರಷ್ಟು ಅಗ್ಗದ ದರದಲ್ಲಿ ಔಷಧಿ ಲಭ್ಯವಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು.

Advertisement

ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕ, ಗದಗ ನಗರ ಹಾಗೂ ಗದಗ ಗ್ರಾಮೀಣ ಮಂಡಲ ವತಿಯಿಂದ ಶನಿವಾರ ಜಿಲ್ಲಾ ಆಸ್ಪತ್ರೆ ಎದುರು ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಿದ್ದರು.

ರೋಗ ಯಾವುದೇ ಇರಲಿ, ಪೂರೈಕೆಯಲ್ಲಿರುವ ಔಷಧಿಯನ್ನೇ ವೈದ್ಯರು ಬರೆದುಕೊಡುವ ಅನಿವಾರ್ಯ ಪರಿಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿದೆ. ಹೀಗಾದರೆ ರೋಗಿಯ ಕಾಯಿಲೆ ವಾಸಿಯಾಗುವದಾದರೂ ಹೇಗೆ ಎಂದು ಆತಂಕ ವ್ಯಕ್ತಪಡಿಸಿದರು.

ಜನೌಷಧಿ ಕೇಂದ್ರಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸ್ವಾಮ್ಯದ ಸಂಸ್ಥೆಗಳೇ ಔಷಧಿ ಪೂರೈಸುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಪ್ರಮಾಣೀಕೃತವಾಗಿವೆ. ಮಧುಮೇಹ, ಹೃದಯ ಸಂಬAಧಿ ದೀರ್ಘಾವಧಿ ಕಾಯಿಲೆಗಳ ಔಷಧಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ವಿತರಣೆ ಆಗದಿದ್ದಾಗ ರೋಗಿಗಳು ಅಗ್ಗದ ದರದಲ್ಲಿ ಜನೌಷಧಿ ಕೇಂದ್ರಗಳಲ್ಲಿ ಖರೀದಿಸುತ್ತಾರೆ. ಆಸ್ಪತ್ರೆಗಳಲ್ಲಿ ಎಲ್ಲಾ ಔಷಧಿ ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಲಿ. ಜೊತೆಗೆ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಬಾರದು ಎಂದು ಶಾಸಕ ಚಂದ್ರು ಲಮಾಣಿ ಆಗ್ರಹಿಸಿದರು.

ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿ, ಔಷಧಿ ಲಾಬಿಗೆ ಮಣಿದ ರಾಜ್ಯ ಸರ್ಕಾರ ಹಣ ಮಾಡಿಕೊಳ್ಳುವ ಉದ್ದೇಶದಿಂದ ಇಂತಹ ಹೇಯ ಕೃತ್ಯಕ್ಕೆ ಮುಂದಾಗಿದ್ದು, ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಬಿಜೆಪಿ ಇನ್ನು ಹೆಚ್ಚಿನ ಹೋರಾಟ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮುಖಂಡರಾದ ಶ್ರೀಪತಿ ಉಡುಪಿ, ರವಿ ದಂಡಿನ, ಬಸವಣ್ಣೆಪ್ಪ ಚಿಂಚಲಿ, ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ನಗರಸಭಾ ಸದಸ್ಯರಾದ ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ ಮುಂತಾದವರು ಮಾತನಾಡಿದರು.

ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ವಿನಾಯಕ ಮಾನ್ವಿ, ಅಶೋಕ ಸಂಕಣ್ಣವರ, ವಿದ್ಯಾವತಿ ಗಡಗಿ, ಲಕ್ಷ್ಮೀ ಕಾಕಿ, ವಿಜಯಲಕ್ಷ್ಮೀ ಮಾನ್ವಿ, ಸುಧೀರ ಕಾಟಿಗೇರ, ನಾಗರಾಜ ತಳವಾರ, ಭದ್ರೇಶ ಕುಸಲಾಪೂರ, ವಾಯ್.ಪಿ. ಅಡನೂರ, ಮಂಜುನಾಥ ಮುಳಗುಂದ, ಎಂ.ಎಂ. ಹಿರೇಮಠ, ಭದ್ರೇಶ ಕುಸ್ಲಾಪೂರ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಬಿ.ಎಸ್. ಚಿಂಚಲಿ, ನಿಂಗಪ್ಪ ಹುಗ್ಗಿ, ಪಕ್ಕಿರೇಶ ರಟ್ಟಿಹಳ್ಳಿ, ವಿನೋದ ಹಂಸನೂರ ಮುಂತಾದವರು ಭಾಗವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜನಹಿತವನ್ನು ಕಾಪಾಡಬೇಕಾದ ಸರ್ಕಾರವೇ ಜನರ ರಕ್ತ ಹೀರುತ್ತಿರುವದು ನಾಚಿಕೆಗೇಡಿನ ಸಂಗತಿ. ಸರ್ಕಾರಿ ಆಸ್ಪತ್ರೆಗಳಿಗೆ ಬರುವವರು ಹೆಚ್ಚಾಗಿ ಬಡವರು, ಆರ್ಥಿಕ ಅನಕೂಲ ಇಲ್ಲದವರು. ಅಂತವರ ಬವಣೆ ಅರಿತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 16 ವರ್ಷಗಳ ಹಿಂದೆಯೇ ಇಂತಹ ಯೋಜನೆಯನ್ನು ಜಾರಿಗೆ ತಂದಿದ್ದು ದೇಶದಾದ್ಯಂತ 15 ಸಾವಿರಕ್ಕಿಂತಲೂ ಹೆಚ್ಚು ಕೇಂದ್ರಗಳು ತೆರೆಯಲ್ಪಟ್ಟಿವೆ. ಕೋಟ್ಯಾಂತರ ಜನರಿಗೆ ಇದರಿಂದ ಪ್ರಯೋಜನವಾಗಿದೆ. ಮೊದಲಿನಂತೆ ಜನೌಷಧಿ ಕೇಂದ್ರ ಪ್ರಾರಂಭಿಸಬೇಕು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here