ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗೋವಿನಜೋಳ ಖರೀದಿ ಕೇಂದ್ರವನ್ನು ಆರಂಭಿಸುವಂತೆ ಆಗ್ರಹಿಸಿ ಕಳೆದ 8 ದಿನಗಳಿಂದ ಪಟ್ಟಣದ ಶಿಗ್ಲಿ ನಾಕಾದ ವೀರಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ನಡೆದಿರುವ ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಶನಿವಾರ ಭೇಟಿ ನೀಡಿ, ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಉಪವಾಸ ಸತ್ಯಾಗ್ರಹ ಮುಂದುವರೆಸಿರುವ ಹೋರಾಟಗಾರರ ಆರೋಗ್ಯ ವಿಚಾರಿಸಿದರು.
ನಂತರ ಸೇರಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಸಂಸದರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮನ್ವಯದಿಂದ ಕೆಲಸ ಮಾಡಿದಾಗ ರೈತರನ್ನು ಉಳಿಸಬಹುದು. ಕೇಂದ್ರದೆಡೆಗೆ ರಾಜ್ಯ ಸರ್ಕಾರ ಬೊಟ್ಟು ಮಾಡುವುದನ್ನು ಬಿಡಬೇಕು. ಲಕ್ಷ್ಮೇಶ್ವರ ಭಾಗದ ರೈತರ ಹೋರಾಟದಿಂದ ಮೆಕ್ಕೆಜೋಳ ಬೆಳೆದ ರಾಜ್ಯದ ರೈತರಿಗೆ ನ್ಯಾಯ ದೊರಕುವಂತಾಗಿದ್ದು ಹೆಮ್ಮೆಯ ಸಂಗತಿಯಾಗಿದೆ. ಈಗ ಸರ್ಕಾರ ಖರೀದಿ ಕೇಂದ್ರ ತೆರೆಯುತ್ತೇವೆ ಎಂದಿದೆ. ಯಾವ ಏಜೆನ್ಸಿ ಮೂಲಕ ಖರೀದಿ ಮಾಡುತ್ತಾರೆ ಎಂಬುದನ್ನು ತಿಳಿಸಿಲ್ಲ. ಯಾವ ಏಜೆನ್ಸಿಯಿಂದ ಖರೀದಿಸುತ್ತಾರೆ ಎನ್ನುವುದು ಮುಖ್ಯ. ಮಾರುಕಟ್ಟೆಗೆ 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬರುತ್ತದೆ. ಹೀಗಾಗಿ ಹೆಚ್ಚಿಗೆ ಖರೀದಿಗೆ ಆದೇಶ ಮಾಡಬೇಕು. ಕೆಎಂಎಫ್‌ನಿಂದ ನೇರ ಖರೀದಿಸಲು ಸೂಚಿಸಬೇಕು. ಎಥೆನಾಲ್ ಕಂಪನಿಗಳು ಗೋವಿನಜೋಳ ಖರೀದಿಸುತ್ತಿವೆ. ಅವರು ಏಜೆಂಟರಿಂದ ಖರೀದಿಸುತ್ತಾರೆ. ಅದನ್ನು ತಪ್ಪಿಸಿ ನೇರವಾಗಿ ರೈತರಿಂದ ಖರೀದಿಸುವ ವ್ಯವಸ್ಥೆ ಮಾಡಬೇಕು. ಸುಮಾರು 35 ಎಥೆನಾಲ್ ಫ್ಯಾಕ್ಟರಿಗಳಿವೆ. ರಾಜ್ಯ ಸರ್ಕಾರ ರೈತರ ಜೊತೆಗಿದೆಯೋ ಅಥವಾ ಕಾರ್ಖಾನೆ ಮಾಲೀಕರ ಜೊತೆ ಇದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ನಾನು ಸಿಎಂ ಆಗಿದ್ದಾಗ ಪ್ರವಾಹ ಬಂದ ಸಂದರ್ಭದಲ್ಲಿ ಇಂದಿನ ಸಿಎಂ ಸಿದ್ದರಾಮಯ್ಯನವರು ಪರಿಹಾರ ಯಾವಾಗ ಕೊಡುತ್ತೀರಿ ಎಂದು ಟೇಬಲ್ ಕುಟ್ಟಿ ಕೇಳಿದರು. ನಾನು ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಕೊಟ್ಟಿದ್ದೆ. ಯಾವುದಕ್ಕೂ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸಲಿಲ್ಲ. ರೈತರನ್ನು ಉಳಿಸಿಕೊಳ್ಳಬೇಕೆಂಬ ಮನಸ್ಸಿರಬೇಕು. ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆ ತೋರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರವಿಕಾಂತ ಅಂಗಡಿ, ಮಂಜುನಾಥ ಮಾಗಡಿ, ಬಸವರಾಜ ಬೆಂಡಿಗೇರಿ, ಪೂರ್ಣಾಜಿ ಕರಾಟೆ, ಹಿರಿಯ ಮುಖಂಡ ಸಣ್ಣೀರಪ್ಪ ಹಳ್ಳೆಪ್ಪನವರ, ನಾಗರಾಜ ಚಿಂಚಲಿ, ಮಹೇಶ್ ಹೊಗೆಸೊಪ್ಪಿನ, ಶರಣು ಗೋಡಿ, ಎಂ.ಎಸ್. ದೊಡ್ಡಗೌಡ್ರ, ಹೊನ್ನಪ್ಪ ವಡ್ಡರ, ಚಂಬಣ್ಣ ಬಾಳಿಕಾಯಿ, ನಿಂಬಣ್ಣ ಮಡಿವಾಳರ, ನೀಲಪ್ಪ ಶೆರಸೂರಿ, ಪ್ರವೀಣ ಬಾಳಿಕಾಯಿ, ಗಿರೀಶ ಅಗಡಿ, ಪ್ರಕಾಶ ಕೊಂಚಿಗೇರಿ ಮಠ, ದಾದಾಪೀರ ಮುಚ್ಚಾಲೆ, ಬಸವರಾಜ ಅರಳಿ, ಸುರೇಶ ಹಟ್ಟಿ, ಮಂಜುನಾಥ ಮುಳಗುಂದ, ಮಲ್ಲಿಕಾರ್ಜುನ ನಿರಾಲೋಟ್, ಟಾಕಪ್ಪ ಸಾತಪೂತೆ, ರಾಮಣ್ಣ ಗೌರಿ ಸೇರಿದಂತೆ ಅನೇಕ ರೈತರು ಇದ್ದರು.
ರಾಜ್ಯ ಸರ್ಕಾರ ರೈತರ ಮಾಲನ್ನು ವಾಪಸ್ ಕಳುಹಿಸದೇ ಖರೀದಿ ಮಾಡಬೇಕು. ರಾಜ್ಯ ಸರ್ಕಾರ ಬೆಲೆ ನಿಗದಿ ಮಾಡಲು ಆಯೋಗ ರಚನೆ ಮಾಡಿತ್ತು. ಆ ಆಯೋಗ ವರದಿ ನೀಡಿದೆ. ಅದರ ಆಧಾರದಲ್ಲಿ ವೈಜ್ಞಾನಿಕವಾಗಿ ದರ ನಿಗದಿ ಮಾಡಲಿ. ಈಗಾಗಲೇ ಹೆಸರೋ ಕೇಂದ್ರ ತೆರೆದಿದ್ದಾರೆ. ಅಲ್ಲಿ ಗ್ರೇಡಿಂಗ್ ಮಾಡಿ ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಗೋವಿನಜೋಳದ ವಿಚಾರದಲ್ಲಿಯೂ ಹಾಗೆ ಆಗಬಾರದು. ಅದಕ್ಕಾಗಿ ಎಲ್ಲ ಖರೀದಿ ಕೇಂದ್ರದಲ್ಲೂ ರೈತ ಪ್ರತಿನಿಧಿಗಳನ್ನು ಕೂಡಿಸಬೇಕು ಎಂದು ಸಂಸದ ಬೊಮ್ಮಾಯಿ ಹೇಳಿದರು.


