ಬೀದರ್ (ನ.17): ರಾಜ್ಯ ಸರ್ಕಾರ ನಿದ್ರಾ ಸ್ಥಿತಿಯಲ್ಲಿದೆ. ಕೂಡಲೇ ನಿದ್ರೆಯಿಂದ ಎದ್ದು ರಾಜ್ಯದ ರೈತರ ಬೆನ್ನಿಗೆ ನಿಲ್ಲುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೀದರ್ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಬೀದರ್ ಜಿಲ್ಲೆಯಲ್ಲಿ ಬಿತ್ತನೆ ಮಾಡಲಾಗಿದ್ದ ಸೋಯಾ ಬೆಳೆ ಶೇಕಡಾ 10% ರಷ್ಟು ಕೂಡ ಫಲ ಕೊಟ್ಟಿಲ್ಲ. ತೊಗರಿ ಬೆಳೆ ಕೂಡ ಅರ್ಧಕ್ಕೆ ನಿಂತಿದೆ. ಮಳೆಯ ಕೊರತೆಯಿಂದ ತೇವಾಂಶವಿಲ್ಲದೆ ಅನೇಕ ಬೆಳೆಗಳು ಹಾಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಬೀದರ್ ಜಿಲ್ಲೆಯಲ್ಲಿ 2,68,949 ಹೆಕ್ಟೇರ್ ಬೆಳೆ ಹಾನಿಯಾಗಿದೆ. 330 ಕೋಟಿ ಹತ್ತು ಲಕ್ಷ ರೂ. ಪರಿಹಾರ ಬೇಕು ಅಂತ ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಹಿಂದೆ ಯಾವತ್ತು ಇಲ್ಲದ ಬರಗಾಲ ಈ ಬಾರಿ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ರೈತರ ಉಳಿವಿಗಾಗಿ, ಅವರ ಆತ್ಮಸ್ಥೈರ್ಯಕ್ಕಾಗಿ ನೀವು ಯಾವ ಕಾರ್ಯಕ್ರಮ ನೀಡಿದ್ದಿರಿ ಎಂಬುದನ್ನು ರೈತರ ಮುಂದಿಡಿ.
ಬೀದರ್ ಜಿಲ್ಲೆಯ ಬರ ಪರಿಹಾರಕ್ಕಾಗಿ ನಾಲ್ಕು ಕೋಟಿ ರೂ. ಕೊಟ್ಟರೆ ಸಾಕಾಗುತ್ತಾ.? ಬರಗಾಲ ಘೋಷಣೆಯಾದ ನಂತರ ಮೇವು, ನೀರು, ಉದ್ಯೋಗ ಖಾತ್ರಿ ಕೆಲಸಕ್ಕೆ ಮಹತ್ವ ನೀಡಬೇಕಾಗಿತ್ತು. ಆದರೇ ಸರ್ಕಾರ ಆ ಕೆಲಸ ಮಾಡಲಿಲ್ಲ. ಬೀದರ್ ನಲ್ಲಿ ಉದ್ಯೋಗ ಖಾತ್ರಿ ಅವಶ್ಯಕತೆಯಿದೆ. ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸುವ ಕೆಲಸ ಮಾಡಬೇಕು ಅದು ಆಗಿಲ್ಲ. ಮೇವು ಬ್ಯಾಂಕ್ ಗಳು ಎಲ್ಲಿಯೂ ಒಪನ್ ಆಗಿಲ್ಲ. ಕುಡಿಯುವ ನೀರಿಲ್ಲ.
ರಾಜ್ಯ ಸರ್ಕಾರದವ್ರು ನಿದ್ರೆಯಿಂದ ಎದ್ದೇಳಬೇಕು. ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಪ್ರತಿಯೊಂದು ವಿಷಯದಲ್ಲೂ ಕೂಡ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುವುದನ್ನು ಬೀಡಬೇಕು. ರೈತಾಪಿ ಜನರನ್ನು ಉಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ರೈತರ ಸಾಲಕ್ಕೆ ಕನಿಷ್ಠ ಮೂರು ವರ್ಷವಾದರು ಬಡ್ಡಿ ಮನ್ನಾ ಮಾಡಬೇಕು. ಸಾಲ ವಸೂಲಿಯನ್ನು ಮೂರು ವರ್ಷವಾದರು ನಿಲ್ಲಿಸಬೇಕು ಎಂದು ಬಂಡೆಪ್ಪ ಖಾಶೆಂಪುರ್ ರವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.