ಹಾವೇರಿ: ನದಿ ಜೋಡಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಆಗಲು ಬಿಡಬಾರದು. ಕೃಷ್ಣಾ ಹಾಗೂ ಕಾವೇರಿ ಜಲಾನಯನದಿಂದ ನಮಗೆ ಹೆಚ್ಚು ನೀರು ಸಿಗುತ್ತದೆ. ನಮ್ಮ ನಿಲುವನ್ನು ಗಟ್ಟಿಯಾಗಿ ಹೇಳಬೇಕು. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಗ್ರಹಿಸಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನದಿ ಜೋಡಣೆ ನ್ಯಾಯಬದ್ದ ಹಂಚಿಕೆ ಕರಡು ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ ಮಾಡಲು ನಿರಾಕರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ನಡೆದು 15 ವರ್ಷ ಆಯ್ತು. ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಅಥಾರಿಟಿಯವರು ಮಾಡಿದ್ದರು. ಕಾವೇರಿ, ಗೋದಾವರಿ, ಕೃಷ್ಣಾ ಮಹಾನದಿ ನಾಲ್ಕು ನದಿಗಳ ಜೋಡಣೆ ಮಾಡಿದರೆ, ಆಯಾ ಎಲ್ಲಾ ರಾಜ್ಯಗಳಿಗೆ ಪಾಲು ಹಂಚಬೇಕು ಅಂತ ಒಂದು ನೀತಿ ಇತ್ತು.
ಮೊದಲನೇ ಡಿ ಪಿ ಆರ್ ಮಾಡಿದಾಗ ನಮ್ಮ ರಾಜ್ಯಕ್ಕೆ 130 ಟಿಎಂಸಿ ನೀರು ಸಿಗುತ್ತದೆ ಅಂತ ಇತ್ತು. ಎರಡನೇ ಬಾರಿಗೆ ಮತ್ತೆ ಕಡಿಮೆ ಮಾಡಿದರು. ಹೀಗಾಗಿ ನಾನು ನೀರಾವರಿ ಸಚಿವನಿದ್ದಾಗ ಅದನ್ನು ವಿರೋಧ ಮಾಡಿದ್ದೆ. ನಮ್ಮ ರಾಜ್ಯದ ವಕೀಲರನ್ನು ಕಳುಹಿಸಿ ವಾದ ಮಾಡಿಸಿದ್ದೆ ಎಂದು ಹೇಳಿದರು.
ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕದ ಪಾಲು ಸಿಗಲೇಬೇಕು. ರಾಜ್ಯ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಬಾರದು. ಕೇವಲ ಆಂದ್ರ ಹಾಗೂ ತಮಿಳುನಾಡಿಗೆ ಮಾತ್ರ ಪ್ರಯೋಜನ ಆಗುತ್ತದೆ. ನಮ್ಮ ಕರ್ನಾಟಕಕ್ಕೆ ಅನ್ಯಾಯ ಆಗಲು ಬಿಡಬಾರದು. ಕೃಷ್ಣಾ ಹಾಗೂ ಕಾವೇರಿ ಜಲಾನಯನದಿಂದ ನಮಗೆ ಹೆಚ್ಚು ನೀರು ಸಿಗುತ್ತದೆ. ಈ ವಿಚಾರದಲ್ಲಿ ನಮ್ಮ ನಿಲುವನ್ನು ಗಟ್ಟಿಯಾಗಿ ಹೇಳಬೇಕು. ಈ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರು ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.