`ಕಾಗೆ ಕಾರುಣ್ಯದ ಕಣ್ಣು’

0
The story of a writer who seeks reality
Spread the love

`ಆಡು ಮುಟ್ಟದ ಸೊಪ್ಪಿಲ್ಲ, ಬರಗೂರು ರಾಮಚಂದ್ರಪ್ಪ ಬರೆಯದ ವಿಷಯಗಳಿಲ್ಲ’ ಎಂಬ ಮಾತು ಅವರ ಆಯ್ದ ಅನುಭವಗಳ ಕಥನವನ್ನು ಓದಿದಾಗ ನೆನಪಾಗುತ್ತದೆ. ತಮ್ಮ ಆತ್ಮ ಕಥೆಯನ್ನು ಬರೆಯುವುದರ ಬದಲಾಗಿ ತಮ್ಮ ಅನುಭವಗಳ ಕಥನವನ್ನು ಹೇಳಿದ್ದೇನೆ ಎನ್ನುವ ಬರಗೂರು ಅವರ ಮಾತು ಪುಸ್ತಕವನ್ನು ಓದಿದಾಗ ಹೌದೆನ್ನಿಸುತ್ತದೆ. ಎಲ್ಲಿಯೂ ಆತ್ಮ ರತಿಗೆ ಒಳಗಾಗದೆ ಅವರು ಕಥನವನ್ನು ಹೇಳಿಕೊಂಡು ಹೋಗುವ ರೀತಿ ಮನಸ್ಸಿಗೆ ಹಿಡಿಸುತ್ತದೆ. ಓದಲೆಂದು ಕೈಗೆತ್ತಿಕೊಂಡ ಪುಸ್ತಕವನ್ನು ಕೆಳಗಿಡದಂತೆ ಓದಿಸಿಕೊಂಡು ಹೋಗುತ್ತದೆ.

Advertisement

ಬರಗೂರು ತಮ್ಮ ಬಾಲ್ಯದಿಂದ ಹಿಡಿದು ಈವರೆಗೆ ಸಾಗಿ ಬಂದಿರುವ ಎಲ್ಲ ಅನುಭವಗಳನ್ನೂ ಈ ಕಥನದಲ್ಲಿ ವಿವರಿಸಿದ್ದಾರೆ. ತಮ್ಮ ಮನೆತನದ ಪರಿಸ್ಥಿತಿ, ಓದಲು ಇದ್ದ ಅಡಚಣೆ, ಕಠಿಣವಾಗಿದ್ದ ಆರ್ಥಿಕ ಪರಿಸ್ಥಿತಿ, ಇದೆಲ್ಲವನ್ನೂ ಮೀರಿ ತಮ್ಮ ವರ್ಗ ಸಂಘರ್ಷವನ್ನೂ ಸಹ ಬಿಡದಂತೆ ಅವರು ವಿವರಿಸಿದ್ದಾರೆ. ಹೀಗೆ ವಿವರಿಸುವಾಗ ಎಲ್ಲಿಯೂ ತಮ್ಮ ಎಲ್ಲೆಯನ್ನು ಮೀರಿ ಅವರು ಬರೆದಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ.

ಕೆಳ ವರ್ಗದ ಹುಡುಗನೊಬ್ಬ ಶಾಲಾ ಅಭ್ಯಾಸದಲ್ಲಿ ಅತ್ಯಂತ ಜಾಣನಾಗಿದ್ದು, ಎಲ್ಲ ಸಂಕಷ್ಟಗಳನ್ನೂ ಮೆಟ್ಟಿ ನಿಂತು ಎಂ.ಎ.ವರೆಗೆ ಓದಿದ್ದು ಆಗಿನ ಕಾಲದಲ್ಲಿ ಸಣ್ಣ ಸಾಧನೆಯೇನಲ್ಲ. ತಮ್ಮ ಓದಿನ ಬಗ್ಗೆ ಒಂದು ನಿರ್ದಿಷ್ಟ ಗುರಿಯನ್ನಿರಿಸಿಕೊಂಡಿದ್ದ ರಾಮಚಂದ್ರಪ್ಪನವರು ಎಲ್ಲ ಕಷ್ಟಗಳನ್ನೂ ಸಹಿಸಿ, ಎದುರಿಸಿ ತಮ್ಮ ಅಭ್ಯಾಸವನ್ನು ಮುಗಿಸಿ ಉಪನ್ಯಾಸಕ ಹುದ್ದೆಯನ್ನು ಪಡೆಯುವವರೆಗಿನ ವಿಷಯಗಳೆಲ್ಲವೂ ಪರದೆಯ ಮೇಲೆ ಓಡುವ ಚಿತ್ರಗಳಂತೆ ಹಾಗೇ ಸಾಗಿ ಬರುತ್ತವೆ. ಅವರ ಈ ವಿವರಗಳನ್ನು ಓದುತ್ತ ಹೋದಂತೆ ಅಲ್ಲಲ್ಲಿ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ. ಅವರ ಸ್ಥಿತಿಯನ್ನು ಕಂಡು ಜೀವ ಮಮ್ಮಲ ಮರುಗುತ್ತದೆ.

ತಮ್ಮೂರು ಬರಗೂರು ಅದ್ಹೇಗೆ ತಮ್ಮ ಬಾಲ್ಯದಲ್ಲಿ ತಮ್ಮ ಮೇಲೆ ಅಗಾಧವಾದ ಪ್ರಭಾವ ಬೀರಿತು ಎಂಬುದನ್ನು ಪುಸ್ತಕದಲ್ಲಿ ಬರಗೂರು ಸೊಗಸಾಗಿ ವರ್ಣಿಸಿದ್ದಾರೆ. ತಮ್ಮೂರಿನ ಜಾಲಿ ಗಿಡ, ಬೆಟ್ಟ ಗುಡ್ಡ, ಕಾಗೆ, ಕೆರೆ, ಕುಂಟಿ, ಹಳ್ಳ, ಕೊಳ್ಳ, ಗುಬ್ಬಚ್ಚಿ, ಬೇವು ಹೊಂಗೆ ಮರಗಳು ಮುಂತಾದ ಸೃಷ್ಟಿಯ ಸೊಬಗು ತಮ್ಮನ್ನು ಅದ್ಹೇಗೆ ರೂಪಿಸಿತು ಎಂಬುದರ ವಿವರಣೆ ಪುಸ್ತಕದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಇವನೇನು ಓದ್ಯಾನು? ಎಂಬ ಜನರ ನಡುವೆ ತನಗೂ ಓದಲು ಬರುತ್ತದೆ, ಅಷ್ಟೇ ಅಲ್ಲದ ಉತ್ತಮ ಅಂಕ ಗಳಿಸಲೂ ಬರುತ್ತದೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಇದಕ್ಕೆ ಇಂಬು ಕೊಡುವಂತೆ ತಮ್ಮ ಬಗಲಲ್ಲಿ ಪುಸ್ತಕವೊಂದನ್ನು ಇರಿಸಿಕೊಂಡು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಹೊರಟಿದ್ದನ್ನೂ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.

ತಮ್ಮ ಉಪನ್ಯಾಸಕ ಹುದ್ದೆಯನ್ನು ಉಳಿಸಿಕೊಳ್ಳುವ ಕಾರ್ಯ ಆಗಿನ ದಿನಗಳಲ್ಲಿ ಎಷ್ಟು ಕಷ್ಟವಾಗಿತ್ತು ಎಂಬುದನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದಾರೆ. ಕಾಗೆಯ ಗುಣ ನಮ್ಮಲ್ಲಿಯೂ ಬರಲಿ, ಇದ್ದುದನ್ನು ಎಲ್ಲರೂ ಹಂಚಿ ತಿನ್ನೋಣ, ಕಾಗೆಗೆ ಇರುವ ಕಾರುಣ್ಯದ ಕಣ್ಣು ನಮಗೂ ಇರಲಿ ಎಂಬ ಆಶಯದೊಂದಿಗೆ ಈ ಕಥನವನ್ನು ಬರಗೂರು ಬರೆದಿದ್ದಾರೆ ಎಂದೆನಿಸುತ್ತದೆ. ಒಂದು ಕಡೆಯಲ್ಲಿ ಅವರು ಹೇಳುತ್ತಾರೆ-ಈ ಪುಸ್ತಕಕ್ಕೆ ಈ ಹೆಸರನ್ನೇ ಯಾಕೆ ಇಟ್ಟಿರಿ ಎಂಬುದು ನಿಮಗೆ ಪುಸ್ತಕ ಓದಿದ ನಂತರ ತಿಳಿಯುತ್ತದೆ ಎಂದಿದ್ದಾರೆ. ಓದಿದ ನಂತರ ಖಂಡಿತ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.

ತಮ್ಮ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಒಂದು ಹುದ್ದೆಯಲ್ಲಿದ್ದಾಗ ಮತ್ತೊಂದು ಹುದ್ದೆಯ ಪ್ರಭಾರಿ ಅವಕಾಶ ಬಂದರೂ ಅದನ್ನು ನಯವಾಗಿ ತಿರಸ್ಕರಿಸುತ್ತಾರೆ ಬರಗೂರು. ಹಲವಾರು ಮುಖ್ಯಮಂತ್ರಿಗಳೊಂದಿಗೆ, ಸಚಿವರುಗಳೊಂದಿಗೆ, ಶಾಸಕರೊಂದಿಗೆ, ಸಿನೆಮಾ ನಟರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದ ಡಾ. ಬರಗೂರು ಎಲ್ಲಿಯೂ ತಮ್ಮ ಎಲ್ಲೆಯನ್ನು ದಾಟದಂತೆ ಎಚ್ಚರಿಕೆ ವಹಿಸಿದ್ದಾರೆ. ಚಿತ್ರ ರಂಗದಲ್ಲಿ ಅವರು ಅತ್ಯಂತ ಹೆಚ್ಚಾಗಿ ಹಚ್ಚಿಕೊಂಡಿದ್ದು ಡಾ. ರಾಜ್‌ಕುಮಾರ್ ಅವರನ್ನು.

ಚಲನಚಿತ್ರ ರಂಗದಲ್ಲಿಯೂ ಸಹ ತಮ್ಮ ಛಾಪನ್ನು ಮೂಡಿಸಲು ಯತ್ನಿಸಿದ ಬರಗೂರು ಅಲ್ಲಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ತಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ಮತ್ತು ನೀತಿಯನ್ನು ಇಟ್ಟುಕೊಂಡು ಬಂದಿರುವ ಬರಗೂರು ಅವರನ್ನು ಇನ್ನಷ್ಟು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳಲು ನೀವೊಮ್ಮೆ `ಕಾಗೆ ಕಾರುಣ್ಯದ ಕಣ್ಣು’ ಆಯ್ದ ಅನುಭವಗಳ ಕಥನವನ್ನು ಓದಬೇಕು.

– ಅರುಣ ಬಿ.ಕುಲಕರ್ಣಿ.
ನರೇಗಲ್ಲ-ಕೋಡಿಕೊಪ್ಪ.

ಕಾಗೆ ಕಾರುಣ್ಯದ ಕಣ್ಣು.
ಲೇ: ಬರಗೂರು ರಾಮಚಂದ್ರಪ್ಪ.
ಪುಟಗಳು: 360.
ಬೆಲೆ: 395 ರೂ.
ಪ್ರಕಾಶಕರು: ಅಂಕಿತ ಪುಸ್ತಕ.
ಗಾಂಧಿ ಬಜಾರ, ಬಸವನಗುಡಿ-ಬೆಂಗಳೂರು.


Spread the love

LEAVE A REPLY

Please enter your comment!
Please enter your name here