ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ ಅವರ ಭರವಸೆಯ ಹಿನ್ನೆಲೆನಲ್ಲಿ ನರೇಗಲ್ಲ ರೈತರ ಅನಿರ್ದಿಷ್ಟಾವಧಿ ಹೋರಾಟವು ಮಂಗಳವಾರ ಮುಕ್ತಾಯಗೊಂಡಿತು. ಬೆಳೆಗಳಿಗೆ ಬೆಂಬಲ ಬೆಲೆಯನ್ನು ತಕ್ಷಣ ಘೋಷಿಸಬೇಕು, ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಮತ್ತು ಬೆಳೆ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ರೈತರು ನಡೆಸಿದ್ದ ಪ್ರತಿಭಟನಾ ಸ್ಥಳಕ್ಕೆ ಗಜೇಂದ್ರಗಡ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಅವರೊಂದಿಗೆ ಆಗಮಿಸಿದ ಗಂಗಪ್ಪ ರೈತರ ಮನವಿ ಸ್ವೀಕರಿಸಿ, ನಿಮ್ಮೆಲ್ಲ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತಂದು ಬೇಗನೆ ಪರಿಹರಿಸುವಂತೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ಕೈಬಿಟ್ಟರು.
ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಮುನ್ನ ಮಾತನಾಡಿದ ಕರ್ನಾಟಕ ರೈತಸೇನೆ ರಾಜ್ಯಾಧ್ಯಕ್ಷ ವೀರೇಶ ಸೋಬರದಮಠ, ದೇಶದ ಬೆನ್ನೆಲುಬು ರೈತ. ದೇಶಕ್ಕೆ ಅನ್ನ ನೀಡುತ್ತಿರುವ ಅನ್ನದಾತನ ಬದುಕು ಇಂದು ಚಿಂತಾಜನಕವಾಗಿದೆ. ರೈತರು ಬೆಳೆದ ಬೆಳೆಗಳಿಗೆ ಜರುರಾಗಿ ಖರೀದಿ ಕೇಂದ್ರ ತೆರೆಯಲು ಈಗಾಗಲೇ ಉಚ್ಚ ನ್ಯಾಯಾಲಯದಿಂದ ಆದೇಶವಾಗಿದೆ. ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದಿದ್ದರೆ ರೈತ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ. ಮೆಕ್ಕೆಜೋಳದ ಬೆಂಬಲ ಬೆಲೆ 2400 ರೂ. ಇದ್ದು, ಖರೀದಿ ಕೇಂದ್ರ ಇಲ್ಲದಿರುವುದರಿಂದ ರೈತರು ಹೊರಗಡೆ ದಲ್ಲಾಳಿಗಳಿಗೆ 1500–1600 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ನಾವು ಹೋರಾಟ ಮಾಡಿಯೇ ನಮ್ಮ ಬೇಡಿಕೆ ಈಡೇರಿಸಿಕೊಳ್ಳುವಂತಹ ಸ್ಥಿತಿ ಬಂದೊದಗಿದೆ. ಸರ್ಕಾರ ಶೀಘ್ರದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಈ ವೇಳೆ ನರೇಗಲ್ಲ ರೈತಸೇನಾ ಅಧ್ಯಕ್ಷ ಆನಂದ ಕೊಟಗಿ, ಚಂದ್ರು ಹೊನವಾಡ, ಬಾಳಪ್ಪ ಸೊಮಗೊಂಡ, ಶ್ರೀಕಾಂತ ಹೊಸಮನಿ, ಶರಣಪ್ಪ ಗಂಗರಗೋಳ, ಮಲ್ಲಯ್ಯ ಪ್ರಭುಸ್ವಾಮಿಮಠ, ರುದ್ರೇಶ ಕೊಟಗಿ, ಮಲ್ಲನಗೌಡ ಪಾಟೀಲ, ಮಂಜುನಾಥ ಪಾಯಪ್ಪಗೌಡ್ರ, ವೀರೂಪಾಕ್ಷಪ್ಪ ಲಕ್ಕನಗೌಡ್ರ, ಕಳಕಪ್ಪ ಮುಗಳಿ, ಪ್ರಕಾಶ ಪಿಡಗೊಂಡ, ಶೇಖಪ್ಪ ಲಕ್ಕನಗೌಡ್ರ, ಮಂಜುನಾಥ ಕಮಲಾಪೂರ, ಅರುಣ ಜುಟ್ಲದ, ಕೃಷ್ಣಪ್ಪ ಜುಟ್ಲ, ಶೇಖಪ್ಪ ಕಳಕೊಣ್ಣವರ, ಬಸವರಾಜ ಮಡಿವಾಳರ ಸೇರಿದಂತೆ ನೂರಾರು ರೈತರಿದ್ದರು. ರೋಣ ಸಿಪಿಐ ಎನ್. ವಿಜಯಕುಮಾರ, ನರೇಗಲ್ಲ ಪಿಎಸ್ಐ ಐಶ್ವರ್ಯ ನಾಗರಾಳ ಮತ್ತು ಸಿಬ್ಬಂದಿಯವರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ರೈತ ಮುಖಂಡ ಶರಣಪ್ಪ ಧರ್ಮಾಯತ ಮಾತನಾಡಿ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆ ಅಡಿಯಲ್ಲಿ ಕುಸುಬೆ ಖರೀದಿ ಯೋಜನೆಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು. ನಮ್ಮ ಭಾಗದ ವಾಣಿಜ್ಯ ಬೆಳೆಯಾದ ಕುಸುಬೆ ಬೆಳೆಯನ್ನು ಖರೀದಿಸಲು ರಾಜ್ಯ ಸರ್ಕಾರ ಪ್ರೋತ್ಸಾಹಧನ 1500 ರೂಪಾಯಿ ನೀಡುವುದರೊಂದಿಗೆ ಖರೀದಿ ಯೋಜನೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.



