ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ಎದುರಿನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ಪುರಸಭೆ ಎಲ್ಲ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದರು.

Advertisement

ಈ ವೇಳೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ರಾಜ್ಯ ಪರಿಷತ್ ಸದಸ್ಯ, ಹಾಗೂ ಲಕ್ಷ್ಮೇಶ್ವರ ಶಾಖಾ ಅಧ್ಯಕ್ಷ ಬಸವೆಣೆಪ್ಪ ನಂದೆಣ್ಣವರ, ಇನ್ನೊರ್ವ ಮುಖಂಡ ಹನುಮಂತಪ್ಪ ನಂದೆಣ್ಣವರ ಮಾತನಾಡಿ, ಪೌರ ಕಾರ್ಮಿಕರು, ಡ್ರೈವರ್, ಕ್ಲೀನರ್ಸ್, ಲೋಡರ್ಸ್ ಸೇರಿದಂತೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಎಲ್ಲರನ್ನು ಸರಕಾರ ಖಾಯಂಗೊಳಿಸಬೇಕು ಎನ್ನುವದು ಬಹುದಿನಗಳ ಬೇಡಿಕೆಯಾಗಿದ್ದು, ಸರಕಾರ ಇವರನ್ನು ನಿರ್ಲಕ್ಷಿಸುತ್ತಿದೆ. ಈ ಕುರಿತು ಸಂಘದ ರಾಜ್ಯಾದ್ಯಕ್ಷರ ಆದೇಶದ ಮೇರೆಗೆ ಸರಕಾರಕ್ಕೆ 45 ದಿನಗಳ ಗಡುವು ನೀಡಲಾಗಿತ್ತು. ಅಲ್ಲಿಯವರೆಗೆ ಕಪ್ಪು ಪಟ್ಟಿ ಧರಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕೆಲಸ ಮಾಡುತ್ತ ಹೋರಾಟ ಮಾಡಿದ್ದೇವೆ. ಆದರೆ ಸರಕಾರ ಯಾವುದೇ ಹೋರಾಟಕ್ಕೂ ಸ್ಪಂದನೆ ನೀಡುತ್ತಿಲ್ಲ.

ಈಗಾಗಲೇ ಸರಕಾರಕ್ಕೆ ಅನೇಕ ಬಾರಿ ಮನವಿಗಳನ್ನ ಕೊಟ್ಟರೂ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ, ಕೆಲಸವನ್ನು ಸ್ಥಗಿತಗೊಳಿಸಿ ಬೇಡಿಕೆಗಳು ಈಡೇರುವವರೆಗೂ ಅನಿರ್ಧಿಷ್ಟಾವದಿ ಮುಷ್ಕರ ಪ್ರಾರಂಭಿಸಿದ್ದೇವೆ, ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು ಎಂದು ಹೇಳಿದ ಅವರು ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಹೋರಾಟಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಸದಸ್ಯರಾದ ರಮೇಶ ಗಡದವರ, ಮಂಜಕ್ಕ ನಂದೆಣ್ಣವರ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ದೇವಪ್ಪ ನಂದೆಣ್ಣವರ, ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಸಮುದಾಯ ಸಂಘಟನಾ ಅಧಿಕಾರಿ ಶೋಭಾ ಬೆಳ್ಳಿಕೊಪ್ಪ, ಕಂದಾಯ ಅಧಿಕಾರಿ ನಭಿ ಕಂದಗಲ್, ಎಸ್.ಪಿ. ಲಿಂಬಯ್ಯನಮಠ, ಹೇಮರಾಜ ಅಣ್ಣಿಗೇರಿ, ಸಿದ್ದು ಹಿರೇಮಠ, ಮಹೇಶ ಹೊಸಮನಿ, ನೇತ್ರಾ ಹೊಸಮನಿ, ಅಶೋಕ ನಡಗೇರಿ, ದುರ್ಗಪ್ಪ ಬಾಲಣ್ಣವರ, ನೀಲಪ್ಪ ನಂದೆಣ್ಣವರ, ಮುತ್ತಪ್ಪ ದೊಡ್ಡಮನಿ, ಗೋಣೆಪ್ಪ ಗಡದವರ, ಪರಶುರಾಮ ಮುಳಗುಂದ, ವಿಶ್ವನಾಥ ಹಾದಿಮನಿ ಸೇರಿದಂತೆ ಪೌರಕಾರ್ಮಿಕರು, ಸಿಬ್ಬಂದಿಗಳು ಭಾಗವಹಿಸಿದ್ದರು.

ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಪೌರಾಡಳಿತದ ಅಧಿಕಾರಿಗಳು ಸಭೆ ಸೇರಿ ಪೌರಕಾರ್ಮಿಕರ ಸಂಘದ ಬೇಡಿಕೆಗಳ ಕುರಿತು ಸಚಿವರೊಂದಿಗೆ ಚರ್ಚಿಸಿದ್ದು, ಬರುವ 30ರಂದು ಸಭೆ ಸೇರಿ ಬೇಡಿಕೆಗಳ ಕುರಿತು ಚರ್ಚಿಸುವದಾಗಿ ತಿಳಿಸಿದ್ದಾರೆ. ಅಲ್ಲಿಯವರೆಗೆ ಪ್ರತಿಭಟನೆಯನ್ನು ಸ್ಥಗೀತಗೊಳಿಸುವಂತೆ ತಿಳಿಸಿದರು. ಈ ಮಾತಿಗೆ ಒಪ್ಪದ ಮುಖಂಡರು ಚಿತ್ರದುರ್ಗ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷರು ಪ್ರತಿಭಟನೆ ಕೈಬಿಡಲು ಸೂಚಿಸಿದರೆ ಮಾತ್ರ ಹೋರಾಟದಿಂದ ಹಿಂದೆ ಸರಿಯುತ್ತೇವೆ ಎಂದು ಸ್ಪಷ್ಟಪಡಿಸಿದರು.


Spread the love

LEAVE A REPLY

Please enter your comment!
Please enter your name here