HomeArt and Literatureಅಪರೂಪದ ಸಾಧಕನ ಯಶೋಗಾಥೆ

ಅಪರೂಪದ ಸಾಧಕನ ಯಶೋಗಾಥೆ

For Dai;y Updates Join Our whatsapp Group

Spread the love

ಒಬ್ಬ ಸಾಮಾನ್ಯ ಶಿಕ್ಷಕ ಅಸಾಮಾನ್ಯವಾಗಿ ಬೆಳೆದು 5 ದಶಕಗಳ ಸಾರ್ವಜನಿಕ ಬದುಕಿನಲ್ಲಿ ಶತಮಾನದ ಸಾಧನೆಗೈದು ಸತತ 45 ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ತಮ್ಮ ಸಂಸದೀಯ ಪಯಣವನ್ನು ಪೂರ್ಣಗೊಳಿಸಿದ ಬಸವರಾಜ ಹೊರಟ್ಟಿ ದಾಖಲೆಯನ್ನು ಹಿಂದೆಯೂ ಯಾರೂ ಮಾಡಿಲ್ಲ, ಮುಂದೆಯೂ ಯಾರೂ ಮಾಡಲಾರರು.

1980 ಜೂನ್ 30 ರಂದು ಪ್ರಪ್ರಥಮ ಬಾರಿಗೆ ವಿಧಾನಪರಿಷತ್ ಸದಸ್ಯರಾಗಿ ಬಸವರಾಜ ಹೊರಟ್ಟಿಯವರು ಪ್ರಮಾಣವಚನ ಸ್ವೀಕರಿಸಿ ತಮ್ಮ ಸಂಸದೀಯ ಪಯಣವನ್ನು ಆರಂಭಿಸಿದರು. ಆಯುಷ್ಯದ ಅರ್ಧ ಶತಮಾನವನ್ನೇ ವಿಧಾನ ಪರಿಷತ್ತಿನಲ್ಲಿ ಕಳೆಯುವ ಮೂಲಕ ಶಿಕ್ಷಕರ ಹಾಗೂ ಸಾರ್ವಜನಿಕ ಧ್ವನಿಯಾದ ಬಸವರಾಜ ಹೊರಟ್ಟಿಯವರು ಶಿಕ್ಷಕರ ಸಮೂಹದ ಆಸ್ತಿ. ಸದಾಕಾಲ ಶಿಕ್ಷಕರ ಹಾಗೂ ಸಾರ್ವಜನಿಕರ ನೋವು-ದುಗುಡಗಳಿಗೆ ಕಿವಿಯಾದವರು. ಶಿಕ್ಷಕರೊಬ್ಬರು ಶಾಸಕರಾಗಿ, ಸಚಿವರಾಗಿ, ಮೂರನೆಯ ಭಾರಿ ಸಭಾಪತಿಯಾಗಿ ಸೇವೆ ಸಲ್ಲಿಸುತ್ತಿರುವ ಸೌಭಾಗ್ಯ ರಾಜಕೀಯ ಇತಿಹಾಸದಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಸಿಗುತ್ತದೆ. ಅಂತಹ ಅವಕಾಶ ದೇಶದ ಇತಿಹಾಸದಲ್ಲೇ ಹೊರಟ್ಟಿಯವರಿಗೆ ಸಿಕ್ಕಿದ್ದು ಅವರ ಹಿತೈಷಿಗಳಿಗೆ ಹೆಮ್ಮೆಯ ಸಂಗತಿ.

ಬರೆಯುವಂತೆ ಬದುಕುತ್ತಿರುವ ಬಸವರಾಜ ಹೊರಟ್ಟಿಯವರ 45 ವರ್ಷಗಳ ಸಂಸದೀಯ ಪಯಣದ ಯಶೋಗಾಥೆ ರೋಚಕ ಹಾಗೂ ರೋಮಾಂಚಕ. ಇಂದು ಉದ್ಯಮವಾಗಿರುವ ರಾಜಕೀಯ ಕ್ಷೇತ್ರದಲ್ಲಿ ಶುದ್ಧಹಸ್ತರಾಗಿ ರಾಜಕಾರಣ ಮಾಡುವುದೆಂದರೆ ದಿನವೂ ಅಗ್ನಿ ದಿವ್ಯಗಳನ್ನು ಹಾಯುವ, ನೋವು-ಸಂಕಟಗಳನ್ನು ಜೀರ್ಣಿಸಿಕೊಳ್ಳುವ ನೈತಿಕ ಶಕ್ತಿ ರಾಜಕಾರಣಿಗಳಿಗೆ ಇರಬೇಕಾಗುತ್ತದೆ. ಅಂತಹ ನೈತಿಕ ಶಕ್ತಿಯ ಪ್ರತೀಕವೆಂಬಂತೆ ಬಸವರಾಜ ಹೊರಟ್ಟಿಯವರು ಕಾಣಿಸುತ್ತಿದ್ದಾರೆ.

ಹೊರಟ್ಟಿಯವರನ್ನು ಸಮೀಪದಿಂದ ಕಂಡವರಿಗೆ ಮಾತ್ರ ಅವರಲ್ಲೊಬ್ಬ ಅಪ್ಪಟ ಮನುಷ್ಯ ಕಾಣಿಸುತ್ತಾರೆ. ಅಧಿಕಾರದ ಮದವಾಗಲಿ, ಜನಪ್ರೀಯತೆಯ ಭ್ರಮೆಯಾಗಲಿ ಅವರನ್ನು ಕಾಡಿಲ್ಲ. ಜಾತಿ, ಕುಲ, ಗೋತ್ರದ ಕೆಸರನ್ನು ಎಳೆಸುವವರ ಮಧ್ಯದಲ್ಲಿಯೂ ತಾವು ನಂಬಿದ ಮೌಲ್ಯಗಳಿಗೆ ತಕ್ಕ ಹಾಗೆ ಬದುಕುವ ಬಹುದೊಡ್ಡ ಆಶಯವನ್ನು ತಮ್ಮ ನಡೆ-ನುಡಿಗಳಲ್ಲಿ ಗಟ್ಟಿಯಾಗಿ ಉಳಿಸಿಕೊಂಡಿರುವ ಅಪರೂಪದ ರಾಜಕಾರಣಿಯಾಗಿದ್ದಾರೆ. ಜಾತಿ ಹಚ್ಚಿಕೊಂಡು ಹುಟ್ಟಿದರೂ ಎಂದೂ ಮತ ಮತ್ತು ಮತೀಯ ರಾಜಕಾರಣ ಮಾಡದೆ ಇದ್ದ ಅಪರೂಪದ ರಾಜಕಾರಣಿ.

ಕಳೆದ ಶತಮಾನದ 80ರ ದಶಕವು ಕರ್ನಾಟಕದ ಪಾಲಿಗೆ ಹಲವು ರಾಜಕಾರಣಗಳಿಂದ ಮನ್ವಂತರದ ಕಾಲವೆಂದು ಕರೆಯಿಸಿಕೊಳ್ಳುತ್ತಿದೆ. ಈ ಕಾಲದಲ್ಲಿ ರಾಜಕೀಯ ರಂಗ ಪ್ರವೇಶಿಸಿದ ಹೊರಟ್ಟಿಯವರು ಸೋಲಿಲ್ಲದೆ ನಿರಂತರವಾಗಿ 8 ಸಲ ಗೆಲ್ಲುತ್ತಿರುವುದಕ್ಕೆ ಪಕ್ಷ ಕಾರಣವೆಂದು ಹೇಳುವದು ಅಸತ್ಯವಾದೀತು. ವೈಯಕ್ತಿಕ ವ್ಯಕ್ತಿತ್ವದ ಕಾರಣದಿಂದ ಸೋಲನ್ನು ಮಣಿಸಿ ನಿರಂತರ ಗೆಲುವಿನೊಂದಿಗೆ ಅವರು ದಿಟ್ಟಹೆಜ್ಜೆಗಳನ್ನು ಹಾಕುತ್ತಿದ್ದಾರೆಂಬುದು ಕನ್ನಡಿಗರ ಪ್ರಾಮಾಣಿಕ ಅಭಿಪ್ರಾಯ. ಅಲ್ಲದೇ ತಾವು ನಂಬಿದ ಶಿಕ್ಷಕರ ಸಮೂಹ ಹೊರಟ್ಟಿಯವರ ಬಳಿ ಎಂದೂ ಸೋಲನ್ನು ಸುಳಿಯದಂತೆ ನೋಡಿಕೊಂಡಿರುವದು ಶಿಕ್ಷಕ ಮತ್ತು ಹೊರಟ್ಟಿಯವರ ಅವಿನಾಭಾವ ಸಂಬಂಧ ಎಷ್ಟು ಗಟ್ಟಿ ಎನ್ನುವುದಕ್ಕೆ ಅವರ ಸತತ ಗೆಲುವೇ ಸಾಕ್ಷಿ.

ಒಬ್ಬ ಸಾಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಮಗನಾಗಿ, ಸ್ವತಃ ಶಿಕ್ಷಕರಾಗಿ, ಶಿಕ್ಷಕ ಸಮೂಹದ ಪ್ರತಿನಿಧಿಗಳಾಗಿ ವಿಧಾನ ಪರಿಷತ್ ಪ್ರವೇಶಿಸಿ, ಸಚಿವರಾಗಿ, ಮೂರು ಬಾರಿ ಸಭಾಪತಿಗಳಾಗಿ ಆಯ್ಕೆಗೊಂಡು ಒಂದೇ ಕ್ಷೇತ್ರದಿಂದ ಸತತವಾಗಿ ಎಂಟು ಸಲ ಗೆದ್ದು ವಿಶ್ವ ದಾಖಲೆಯೊಂದಿಗೆ ಗಿನ್ನಿಸ್ ರೆಕಾರ್ಡ್ ಹಾಗೂ ಲಿಮ್ಕಾ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಇವರ ಸಾಧನೆ ದಾಖಲೆಯಾಗಿದೆ. ತಮ್ಮ ಜನಪರ ನಿಲುವುಗಳೊಂದಿಗೆ ಜನಮಾನಸದಲ್ಲಿ ರಾಜಕೀಯ ಕ್ಷೇತ್ರದ ದಂತ ಕಥೆಯಾಗಿರುವ ಬಸವರಾಜ ಹೊರಟ್ಟಿಯವರು ಮುಂದಿನ ಪೀಳಿಗೆಗೆ ಮಾದರಿ ರಾಜಕಾರಣಿಯಾಗಿದ್ದಾರೆ.

ತಮ್ಮ 5 ದಶಕಗಳ ಸಾರ್ವಜನಿಕರ ಬದುಕಿನಲ್ಲಿ ಒಂದೇ ಒಂದು ಕಳಂಕವನ್ನು ಮೈಗೆ ಅಂಟಿಸಿಕೊಳ್ಳದೆ ಬದುಕಿದವರು. ತಮ್ಮ ನೇರ ನಡೆ-ನುಡಿಯ ಮೂಲಕ ಕರ್ನಾಟಕದ ರಾಜಕಾರಣದಲ್ಲಿ ತಮ್ಮದೇ ಆದ ಛಾಪನ್ನ, ಗತ್ತನ್ನ ಮೂಡಿಸಿದವರು. ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಯ ವಿಷಯ ಬಂದಾಗAತೂ ಅಂಕಿ-ಸಂಖ್ಯೆಗಳ ಸಮೇತ ಸರ್ಕಾರದ ಕಣ್ಣು ತೆರೆಸಿ, ಆದ ತಾರತಮ್ಯದ ಕುರಿತು ಎಚ್ಚರಿಸಿದವರು. ಇಂದಿಗೂ ತಮ್ಮ ಹುಟ್ಟೂರಿನ ಸಂಬಂಧವನ್ನಿಟ್ಟುಕೊಂಡು ಹುಟ್ಟೂರಿನ ಋಣ ತೀರಿಸುವ ಮೂಲಕ ಒಬ್ಬ ಮಾದರಿ ರಾಜಕಾರಣಿಯಾದವರು.

ಇಂತಹ ಮಹಾನ್ ಸಾಧಕ ಬಸವರಾಜ ಹೊರಟ್ಟಿಯವರು 1980ರಿಂದ 2025ರವರೆಗೆ ಸತತ 45 ವರ್ಷಗಳ ಕಾಲ ವಿಧಾನ ಪರಿಷತ್ತಿನಲ್ಲಿ ತಮ್ಮದೇ ಆದ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಅಲ್ಲದೇ 43 ವರ್ಷಗಳಿಂದ ಶಾಸಕರ ಭವನದ ‘ರೂಮ್ ನಂಬರ್-465’ರಲ್ಲಿ ವಾಸವಾಗಿರುವುದು ಇನ್ನೊಂದು ವಿಶೇಷ. ವಿಧಾನ ಪರಿಷತ್ ಸದಸ್ಯರಾಗಿ 45 ವರ್ಷ ಪೂರ್ಣಗೊಳಿಸಿದ ಈ ಶುಭ ಸಂದರ್ಭದಲ್ಲಿ ಮೇರು ಸಾಧಕನ ಸಾಧನೆಗೆ ನಾವು-ನೀವೆಲ್ಲ ಶುಭ ಹಾರೈಸಿ ಅಭಿನಂದಿಸೋಣ.

-ಡಾ. ಬಸವರಾಜ ಧಾರವಾಡ.

ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!