ಮೇಕಪ್ ಮೂಲಕ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಕಲಾವಿದ ವಿಕ್ರಮ್ ಗಾಯಕ್ವಾಡ್ ಅವರು ವಿಧಿವಶರಾಗಿದ್ದಾರೆ. ಸಂಜು, ಪಿಕೆ, ದಂಗಲ್, ರಂಗ್ ದೆ ಬಸಂತಿ ಮುಂತಾದ ಸೂಪರ್ ಹಿಟ್ ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ವಿಕ್ರಮ್ ಗಾಯಕ್ವಾಡ್ ಅಗಲಿಕೆಯಿಂದ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ.
ವಿಕ್ರಮ್ ಗಾಯಕ್ವಾಡ್ ನಿಧನದ ಸುದ್ದಿಯನ್ನು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಖಚಿತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಹಲವು ವರ್ಷಗಳಿಂದ ವಿಕ್ರಮ್ ಗಾಯಕ್ವಾಡ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಬಹುಬೇಡಿಕೆಯ ಮೇಕಪ್ ಕಲಾವಿದನಾಗಿ ಅವರು ಗುರುತಿಸಿಕೊಂಡಿದ್ದರು.
ಬ್ಲ್ಯಾಕ್ ಮೇಲ್, ಸೂಪರ್ 30, ಬೆಲ್ ಬಾಟಂ, ಥಗ್ಸ್ ಆಫ್ ಹಿಂದುಸ್ತಾನ್, 3 ಈಡಿಯಟ್ಸ್, ದಿಲ್ಲಿ 6, ಭಾಗ್ ಮಿಲ್ಕಾ ಭಾಗ್, ಓಂಕಾರ, ಕಮೀನೆ, ಕೇದಾರ್ನಾಥ್ ಸೇರಿದಂತೆ ಹಲವು ಸಿನಿಮಾಗಳಿಗೆ ವಿಕ್ರಮ್ ಗಾಯಕ್ವಾಡ್ ಅವರು ಕೆಲಸ ಮಾಡಿದ್ದರು. ಅವರ ನಿಧನಕ್ಕೆ ಹಲವು ಸೆಲೆಬ್ರಿಟಿಗಳ ಕಂಬನಿ ಮಿಡಿಯುತ್ತಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.