ಚೆನ್ನೈ:- ಮದುವೆಗೆ ವಲ್ಲೆ ಎಂದ ಶಿಕ್ಷಕಿಗೆ ದುಷ್ಕರ್ಮಿಯೋರ್ವ ಶಾಲೆಯಲ್ಲೇ ಚಾಕು ಇರಿದ ಘಟನೆ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜರುಗಿದೆ.
ರಮಣಿ ಎಂಬ ಶಿಕ್ಷಕಿಗೆ ಮದನ್ ಎಂಬ ವ್ಯಕ್ತಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ಮದನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ರಮಣಿ ಮತ್ತು ಮದನ್ ಪ್ರೇಮಿಗಳಾಗಿದ್ದರು. ಇದಕ್ಕೆ ರಮಣಿ ಅವರ ಕುಟುಂಬ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು. ಇತ್ತೀಚೆಗೆ ಮದನ್‌ನ ಮದುವೆಯ ಪ್ರಸ್ತಾಪವನ್ನು ರಮಣಿ ತಿರಸ್ಕರಿಸಿದ ನಂತರ ಇಬ್ಬರ ನಡುವೆ ಜಗಳ ಹೆಚ್ಚಾಯಿತು. ಇದು ಮಾರಣಾಂತಿಕ ಹಲ್ಲೆಗೆ ಕಾರಣವಾಗಿದ್ದು, ಕೋಪದ ಭರದಲ್ಲಿ ಮದನ್ ರಮಣಿಗೆ ಇರಿದಿದ್ದಾನೆ.
ತೀವ್ರವಾಗಿ ಗಾಯಗೊಂಡಿರುವ ರಮಣಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಆಕೆಯನ್ನು ಹೊತ್ತೊಯ್ದ ವಿಡಿಯೋ ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಶಿಕ್ಷಕಿ ಮೃತಪಟ್ಟಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪೊಲೀಸರು ಮದನ್‌ನನ್ನು ಹಿಡಿದು ತನಿಖೆ ಆರಂಭಿಸಿದ್ದಾರೆ.