ವಿಜಯಸಾಕ್ಷಿ ಸುದ್ದಿ, ಗದಗ: ಮುಹಮ್ಮದ ಪೈಗಂಬರರು ತಮ್ಮ ಪ್ರೀ, ಮಮತೆ ಮತ್ತು ಶಾಂತಿಯ ಸಂದೇಶಗಳ ಮೂಲಕ ಸಮಗ್ರ ಜೀವನ ವ್ಯವಸ್ಥೆಯನ್ನು ಸ್ಥಾಪಿಸಿ ಅದನ್ನು ಇಡೀ ಜಗತ್ತಿಗೆ ಪಸರಿಸಿದ್ದಾರೆ. ಅದ್ಭುತ ಸಂತರಾಗಿ ಗುರುತಿಸಿಕೊಂಡಿರುವ ಅವರ ಚಿಂತನೆಗಳು ಸದಾ ಕಾಲ ಇರುತ್ತವೆ ಎಂದು ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ರಫೀ ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ಮುಹಮ್ಮದ ಪೈಗಂಬರರ ಜನ್ಮದಿನದ ಅಂಗವಾಗಿ ಮಂಜು ಶಿಕ್ಷಣ ಸಂಸ್ಥೆಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆ, ಹೆರಿಗೆ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸಿ ಅವರು ಮಾತನಾಡಿದರು.
ಉಪಾಧ್ಯಕ್ಷ ಎ.ಎಲ್. ಬಿಜಾಪುರ ಮಾತನಾಡಿ, ಸ್ತ್ರೀಕುಲಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಪ್ರವಾದಿ ಪೈಗಂಬರರು ಪರಿಚಯಿಸಿದರು. ವಿವಾಹ ಸಂದರ್ಭದಲ್ಲಿ ವಧುದಕ್ಷಿಣೆ ಹೆಣ್ಣಿನ ಹಕ್ಕು ಎಂದು ಪರಿಗಣಿಸಿದರು. ತಾಯಿ, ಸಹೋದರಿ, ಪತ್ನಿ, ಪುತ್ರಿ ಎಂಬ ನೆಲೆಯಲ್ಲಿ ಹೆಣ್ಣಿನೊಂದಿಗೆ ಜನರ ವ್ಯವಹಾರ ಹೇಗಿರಬೇಕು ಎಂಬುದನ್ನು ಹೇಳಿಕೊಟ್ಟರು. ಕಾರ್ಮಿಕನೊಬ್ಬ ಕೆಲಸ ಮುಗಿಸಿ ಆತನ ಬೆವರು ಆರುವ ಮೊದಲೇ ಕೂಲಿ ಕೊಟ್ಟುಬಿಡಿ ಎನ್ನುವ ಮೂಲಕ ಕಾರ್ಮಿಕನ ಹಕ್ಕು ರಕ್ಷಣೆ ಮಾಡಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ರಷೀದ, ಹಿರಿಯರಾದ ಜನಾಬ ಮಹಬೂಬ ಕಾಗದಗಾರ, ಮುಹಮ್ಮದ ಶೋಯೆಬ ಬಿಜಾಪೂರ, ಅಬ್ದುಲ್ ಸಮದ ಸೇರಿದಂತೆ ಹಿರಿಯರು ಇದ್ದರು.