ಬೆಂಗಳೂರು: ಸರ್ಕಾರಕ್ಕೆ ನಟ್ಟುಬೋಲ್ಟ್ ಟೈಟ್ ಮಾಡುವ ಕಾಲ ಹತ್ತಿರ ಬಂದಿದೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ಜಾಲಿವುಡ್ ಸ್ಟುಡಿಯೋ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಬೀಗ ಜಡಿಯಲಾಗಿದ್ದು, ಇದರಿಂದಾಗಿ ಬಿಗ್ಬಾಸ್ ಶೋ ಸಹ ನಿಂತು ಹೋಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಅವರು,
ಬೀಗ ಹಾಕಲು ಅದೇನು ಫ್ಯಾಕ್ಟರಿಯೇ? ಮಾಲಿನ್ಯ ನಿಯಂತ್ರಣ ಮಂಡಳಿಗೂ ಇದಕ್ಕೂ ಏನು ಸಂಬಂಧ? ಇಲ್ಲಿ ಅನಾರೋಗ್ಯಕರ ಹೊಗೆ ಸೂಸುವ ಕೆಲಸ ನಡೆದಿದೆಯೇ? ಅಂಥ ಫ್ಯಾಕ್ಟರಿಗಳನ್ನು ಇವರು ಮುಚ್ಚಿಲ್ಲ, ಅಲ್ಲಿ ಮಾತ್ರ ಹೊಂದಾಣಿಕೆ. ಇಲ್ಲೇನಿದೆ? ಇದು ಒಂದು ಮನೆಯ ಚಟುವಟಿಕೆ. ಇನ್ನು ಮುಂದೆ ಮನೆ ಮನೆಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸರ್ಟಿಫಿಕೇಟ್ ಬೇಕೇ ಎಂದು ಪ್ರಶ್ನಿಸಿದರು.
ಈ ಮೂಲಕ ಸರ್ಕಾರವು ಸುದೀಪ್ ಅವರನ್ನು ಟಾರ್ಗೆಟ್ ಮಾಡಿದೆ. ರಾಜಣ್ಣ, ನಾಗೇಂದ್ರ ಅವರನ್ನು ಟಾರ್ಗೆಟ್ ಮಾಡಿ ಆಗಿದೆ. ಈಗ ಸುದೀಪ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಎಂದರೆ ಯಾರನ್ನು ಗುರಿ ಮಾಡಿದ್ದಾರೆಂದು ತಿಳಿದುಕೊಳ್ಳಿ.
ಇದು ಜನಾಂಗೀಯ ಟಾರ್ಗೆಟ್ ಆಗುತ್ತದೆ. ಎಚ್ಚರದಿಂದ ಇರುವುದು ಒಳ್ಳೆಯದು. ಜನ ಇದನ್ನು ಸಹಿಸುವುದಿಲ್ಲ. ನಟ್ ಬೋಲ್ಟ್ ನೀವು ಯಾರಿಗೆ ಟೈಟ್ ಮಾಡಲು ಹೊರಟಿದ್ದೀರೋ ಅವರೆಲ್ಲ ಸೇರಿ ಸರ್ಕಾರದ ನಟ್ ಮತ್ತು ಬೋಲ್ಟ್ ಟೈಟ್ ಮಾಡುವ ಕಾಲ ಹತ್ತಿರ ಬಂದಿದೆ ಎಂದು ವಾಗ್ದಾಳಿ ನಡೆಸಿದರು.