ಸರ್ಕಾರಕ್ಕೆ ಬುದ್ಧಿ ಕಲಿಸುವ ಕಾಲ ದೂರವಿಲ್ಲ: ಆನಂದ ಕೊಟಗಿ 

0
???????
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಹೋಬಳಿಯ ರೈತರು ಬೆಂಬಲ ಬೆಲೆಯನ್ನು ತಕ್ಷಣ ಘೋಷಿಸಿ, ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಮತ್ತು ಬೆಳೆ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಚಳವಳಿಯನ್ನು ಸೋಮವಾರ ಶ್ರೀ ಗಣೇಶ ದೇವಸ್ಥಾನದಿಂದ ಪ್ರಾರಂಭಿಸಿದರು.

Advertisement

ಎತ್ತು ಚಕ್ಕಡಿಗಳೊಂದಿಗೆ ಮೆರವಣಿಗೆ ಪ್ರಾರಂಭಿಸಿದ ರೈತರು ಮೆರವಣಿಗೆಯುದ್ದಕ್ಕೂ ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಕೂಗಿ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿದ ರೈತರು ಸರ್ಕಾರದ ವಿರುದ್ಧದ ಘೋಷಣೆಗಳನ್ನು ಕೂಗುವುದನ್ನು ಮುಂದುವರೆಸಿದರು.

ರೈತಸೇನಾ ಅಧ್ಯಕ್ಷ ಆನಂದ ಕೊಟಗಿ ಮಾತನಾಡಿ, ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಎಂದಿಗೂ ರೈತರ ಬಗ್ಗೆ ಕಾಳಜಿ ವಹಿಸಿರುವುದನ್ನು ಕಂಡಿಲ್ಲ. ನಾವು ಹೋರಾಟ ಮಾಡಿದರಷ್ಟೇ ಸರ್ಕಾರ ನಮ್ಮ ಬಗ್ಗೆ ಕಣ್ಣು ತೆರೆಯುತ್ತದೆ. ನಾವು ನಮ್ಮ ರೈತಾಪಿ ಕೆಲಸಗಳನ್ನು ಬಿಟ್ಟು ಹೋರಾಟಕ್ಕಿಳಿಯಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿರುವ ಸರ್ಕಾರಕ್ಕೆ ಬುದ್ಧಿ ಕಲಿಸುವ ಕಾಲ ದೂರವೇನೂ ಇಲ್ಲ. ಚುನಾವಣೆಯಲ್ಲಿ ತಮಗೆ ಮತ ಬೇಕಾದಾಗ ರೈತರ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು ನಂತರ ನಮ್ಮನ್ನೇ ಮರೆತುಬಿಡುತ್ತಿರುವುದು ವ್ಯವಸ್ಥೆಯ ವೈಂಗ್ಯವಾಗಿದೆ ಎಂದರು.

ರೈತ ಮುಖಂಡ ಶರಣಪ್ಪ ಧರ್ಮಾಯತ ಮಾತನಾಡಿ, ಬೆಂಬಲ ಬೆಲೆ ಘೋಷಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಈಗಾಗಲೇ ಹೈಕೋರ್ಟ್ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ. ರೈತ ಒಗ್ಗದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ಮಾತನ್ನು ಇವರು ಮರೆತಂತಿದೆ. ಒಮ್ಮೆ ಇವರಿಗೆ ಸರಿಯಾಗಿ ಚಳಿ ಬಿಡಿಸಿದರೆ ರೈತರ ಮಹತ್ವವೇನು ಎಂಬುದು ಗೊತ್ತಾಗುತ್ತದೆ. ಅದಕ್ಕಾಗಿ ನಾವೆಲ್ಲರೂ ಒಮ್ಮನದಿಂದ ಹೋರಾಡೋಣ ಎಂದರು.

ಸಭೆಯನ್ನು ಉದ್ದೇಶಿಸಿ ಉಮೇಶ ಪಾಟೀಲ ಸೇರಿದಂತೆ ರೈತ ಮುಖಂಡರು ಮಾತನಾಡಿದರು. ಉಪವಿಭಾಗಾಧಿಕಾರಿಗಳನ್ನು ಕರೆಯಿಸಿ, ಸಂಧಾನ ಮಾಡಿಸಬೇಕೆನ್ನುವ ಪೊಲೀಸರ ಪ್ರಯತ್ನ ಫಲ ನೀಡಲಿಲ್ಲ. ಖುದ್ದು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬರಬೇಕೆಂದು ರೈತರು ಪಟ್ಟು ಹಿಡಿದು ತಮ್ಮ ಚಳವಳಿಯನ್ನು ಮುಂದುವರೆಸಿದರು. ಪ್ರತಿಭಟನೆಯಲ್ಲಿ ರುದ್ರೇಶ ಕೊಟಗಿ, ಮಹೇಶ ಜೋಳದ, ಮುತ್ತಣ್ಣ ಯಾವಗಲ್ಲ, ಆನಂದ ಮಾವಿನಕಾಯಿ, ವಿರೂಪಾಕ್ಷಪ್ಪ ಲಕ್ಕನಗೌಡ್ರ, ಕಳಕಪ್ಪ ಮುಗಳಿ, ಶ್ರೀಕಾಂತ ಬೆಡಗಲ್ಲ, ಮಂಜುನಾಥ ಪಾಯಪ್ಪಗೌಡ್ರ, ಶೇಖಪ್ಪ ಲಕ್ಕನಗೌಡ್ರ, ಮಲ್ಲಿಕಾರ್ಜುನ ಪಾಟೀಲ, ಮಹೇಶ್ ಶಿವಶಿಂಹಪರ್, ಮಲ್ಲನಗೌಡ ಮಲ್ಲನಗೌಡ್ರ, ಶಿವಪ್ಪ ಕಡೆತೋಟದ, ವೀರಯ್ಯ ಕಂಬಾಳಿಮಠ, ಶಿವಪ್ಪ ಲಕ್ಕನಗೌಡ್ರ, ಕಳಕಪ್ಪ ಅಬ್ಬಿಗೇರಿ, ಚಂದ್ರು ಲಕ್ಕನಗೌಡ್ರ, ಮಾಂತೇಶ ಹಿರೇಮಠ, ಮಂಜುನಾಥ ಕಮಲಾಪೂರ, ಅರುಣ ಜುಟ್ಲದ ಸೇರಿದಂತೆ ನೂರಾರು ರೈತ ಮುಖಂಡರು ಪಾಲ್ಗೊಂಡಿದ್ದರು.

ಬಾಕ್ಸ್
ರೈತರ ಚಳವಳಿಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗಜೇಂದ್ರಗಡ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿಯವರಿಗೆ ರೈತರು ಬೆಳೆ ಹಾನಿ ಪರಿಹಾರವನ್ನು ಬೇಗನೆ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿದರು. ತಹಸೀಲ್ದಾರರು ಮನವಿ ಸ್ವೀಕರಿಸಿ, ಶೀಘ್ರವೇ ಪರಿಶೀಲಿಸುವುದಾಗಿ ತಿಳಿಸಿದರು. ರೋಣ ಸಿಪಿಐ ವಿಜಯಕುಮಾರ ಮಾರ್ಗದರ್ಶನದಲ್ಲಿ ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ ಮತ್ತು ಸಿಬ್ಬಂದಿಯವರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.


Spread the love

LEAVE A REPLY

Please enter your comment!
Please enter your name here