ಜಗತ್ತು ಡಿಜಿಟಲ್ ಆಗುತ್ತಿರುವಂತೆ ದಿನನಿತ್ಯದ ಎಲ್ಲಾ ಕಾರ್ಯಗಳು ಆನ್‌ಲೈನ್‌ಮಯವಾಗಿವೆ. ಊಟದಿಂದ ಶಾಪಿಂಗ್‌ವರೆಗೂ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಈ ಕಾಲದಲ್ಲಿ, ಇದೀಗ ನಿಶ್ಚಿತಾರ್ಥವೂ ಆನ್‌ಲೈನ್ ಮೂಲಕವೇ ನೆರವೇರಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ನಿವಾಸಿ ಸುಹಾಸ್ ಹಾಗೂ ಉಡುಪಿ ಮೂಲದ ಮೇಘಾ ಅವರು ಆನ್‌ಲೈನ್ ವಿಡಿಯೋ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಮವಾರ ಉಡುಪಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಈ ನಿಶ್ಚಿತಾರ್ಥ ನೆರವೇರಿದ್ದು, ವರನ ಅನುಪಸ್ಥಿತಿಯಲ್ಲಿ ಎರಡೂ ಕುಟುಂಬಗಳು ಕಾರ್ಯಕ್ರಮ ನಡೆಸಿವೆ.
ಕೆನಡಾದಲ್ಲಿ ಉದ್ಯೋಗದಲ್ಲಿರುವ ಸುಹಾಸ್, ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವರ–ವಧು ಇಬ್ಬರೂ ಕ್ಯಾಮೆರಾ ಮೂಲಕ ಉಂಗುರ ತೋರಿಸಿ ನಿಶ್ಚಿತಾರ್ಥ ಮಾಡಿಕೊಂಡರು. ಎಲ್‌ಇಡಿ ಸ್ಕ್ರೀನ್‌ಗೆ ಆರತಿ ಬೆಳಗಿ, ಮಂತ್ರಾಕ್ಷತೆ ಹಾಕಿ ಹಿರಿಯರು ಶುಭ ಹಾರೈಸಿದರು.
ಉಡುಪಿಯಲ್ಲಿ ಹಗಲು ಸಮಯದಲ್ಲೇ ಕಾರ್ಯಕ್ರಮ ನಡೆದರೆ, ಕೆನಡಾದಲ್ಲಿ ಮಧ್ಯರಾತ್ರಿ ವೇಳೆ ಸುಹಾಸ್ ಭಾಗವಹಿಸಿದರು. ಕೆನಡಾ ಮತ್ತು ಭಾರತದ ನಡುವಿನ ಸುಮಾರು 12 ಗಂಟೆಗಳ ಕಾಲಮಾನ ವ್ಯತ್ಯಾಸದ ನಡುವೆಯೂ ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ನೆರವೇರಿತು. ಇಬ್ಬರ ವಿವಾಹ ಜನವರಿ 7 ಮತ್ತು 8 ರಂದು ನಿಗದಿಯಾಗಿದ್ದು, ನಿಶ್ಚಿತಾರ್ಥಕ್ಕೆ ರಜೆ ಸಿಗದ ಕಾರಣ ಆನ್‌ಲೈನ್ ಮೂಲಕವೇ ಕಾರ್ಯಕ್ರಮ ನಡೆಸಲು ಕುಟುಂಬಗಳು ನಿರ್ಧರಿಸಿವೆ.
ಸುಹಾಸ್ ಅವರು ಶ್ರೀಧರ್ ಮೂರ್ತಿ ಮತ್ತು ಗೌರಿ ದಂಪತಿಯ ಜೇಷ್ಠ ಪುತ್ರರಾಗಿದ್ದು, ಬೆಂಗಳೂರಿನಲ್ಲಿ ವ್ಯಾಸಂಗ ಮುಗಿಸಿ ಪ್ರಸ್ತುತ ಕೆನಡಾದ ಖಾಸಗಿ ಕಂಪನಿಯಲ್ಲಿ ಅಪ್ಲಿಕೇಶನ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಧು ಮೇಘಾ ಅವರು ಉಡುಪಿ ನಿವಾಸಿ ರವೀಂದ್ರ ರಾವ್ ಹಾಗೂ ಕಾತ್ಯಾಯಿನಿ ದಂಪತಿಯ ಪುತ್ರಿಯಾಗಿದ್ದು, ಮುಂಬೈನ ಬ್ಯಾಂಕ್ ಒಂದರಲ್ಲಿ ಉದ್ಯೋಗದಲ್ಲಿದ್ದಾರೆ.
ಡಿಜಿಟಲ್ ತಂತ್ರಜ್ಞಾನ ಸಂಪ್ರದಾಯದೊಂದಿಗೆ ಬೆರೆತು, ಹೊಸ ರೀತಿಯ ನಿಶ್ಚಿತಾರ್ಥಕ್ಕೆ ಇದು ಸಾಕ್ಷಿಯಾಗಿದೆ.



