ಭಾರತೀಯ ಸನಾತನ ಪರಂಪರೆಯಲ್ಲಿ `ವೈದ್ಯೋ ನಾರಾಯಣೋ ಹರಿಃ’ ಎಂದು ಹೇಳಲಾಗಿದೆ. ಅಂದರೆ ರೋಗಗಳನ್ನು ಗುಣಪಡಿಸುವ ತಜ್ಞ ವೈದ್ಯರು ಸಾಕ್ಷತ್ ಹರಿ ನಾರಾಯಣನ ಸ್ವರೂಪವೇ ಆಗಿರುತ್ತಾರೆ. ಇಂದಿನ ಆಧುನಿಕ ಒತ್ತಡದ ಜಂಜಾಟದ ಜೀವನ ಶೈಲಿಯಲ್ಲಿ ಬಿ.ಪಿ, ಶುಗರ್‌ನಂತಹ ಅನೇಕ ರೋಗಗಳು ಮನುಷ್ಯನನ್ನು ಜರ್ಜರಿತನನ್ನಾಗಿಸುತ್ತವೆ. ಜೀವನ ಶೈಲಿಯ ರೋಗಗಳಿಗೆ ನಿಧಾನವಾಗಿಯಾದರೂ ಸರಿ, ಶಾಶ್ವತ ಪರಿಹಾರವನ್ನು ನೀಡುವುದೇ ಆಯುರ್ವೇದ.
ಈ ರೋಗಗಳಿಂದ ಜನರನ್ನು ಮುಕ್ತರನ್ನಾಗಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದವರು ಆಯುರ್ವೇದ ತಜ್ಞ ಚಿಕಿತ್ಸಕರಾದ ಡಾ. ಮಹೇಶ ಹಿರೇಮಠ ಮತ್ತು ಡಾ. ಸೌಮ್ಯಶ್ರೀ ಹಿರೇಮಠ ದಂಪತಿಗಳು. ಹಲವು ವರ್ಷಗಳಿಂದ ಗದುಗಿನ ವಿವೇಕಾನಂದ ನಗರದಲ್ಲಿರುವ ಅಕ್ಷಯ ಆಯುರ್ಧಾಮದ ಮೂಲಕ ಈ ದಂಪತಿಗಳು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಮೂಲತಃ ಚಿಕ್ಕಹಂದಿಗೋಳದವರಾದ ಮಹೇಶ ಹಿರೇಮಠರು ಸುಸಂಸ್ಕೃತ ಹಿರೇಮಠ ಮನೆತನದಲ್ಲಿ 1983ರಲ್ಲಿ ಗದಿಗೆಯ್ಯ ಮತ್ತು ಗಿರಿಜಾ ದಂಪತಿಗಳ ಸುಪುತ್ರರಾಗಿ ಕೊಪ್ಪಳದಲ್ಲಿ ಜನಿಸಿದರು. ತಮ್ಮ ಆರಂಭಿಕ ಶಿಕ್ಷಣವನ್ನು ರೋಣದಲ್ಲಿ ಪಡೆದು ಮುಂದೆ ಗದುಗಿನ ಮಾಡಲ್ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ, ಜೆ.ಟಿ ಪ.ಪೂ. ಕಾಲೇಜಿನಿಂದ ಪಿಯುಸಿ ಶಿಕ್ಷಣ ಪಡೆದರು. ಆರಂಭದಿಯಿಂದಲೂ ಇವರಿಗೆ ಪಾರಂಪರಿಕ ವೈದ್ಯಕೀಯ ಪದ್ಧತಿಯಲ್ಲಿ ಅಪಾರ ಆಸಕ್ತಿ. ಇವರ ಅಜ್ಜನವರಾದ ಡಾ. ಗಂಗಾಧರಯ್ಯ ಹಿರೇಮಠರವರು ಪಾರಂಪರಿಕ ಆಯುರ್ವೇದ ತಜ್ಞರಾಗಿರುವುದು ಇವರ ಮೇಲೆ ಪ್ರಭಾವ ಬೀರಿತು. ಗದುಗಿನ ಪ್ರತಿಷ್ಠಿತ ಡಿ.ಜಿ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬಿ.ಎ.ಎಂ.ಎಸ್ ಪದವಿಯನ್ನು ಪಡೆದು, 2010ರಲ್ಲಿ ಗದುಗಿನ ವಿವೇಕಾನಂದ ನಗರದಲ್ಲಿ ತಮ್ಮ `ಅಕ್ಷಯ ಆಯುರ್ಧಾಮ’ ಚಿಕಿತ್ಸಾಲಯವನ್ನು ಪ್ರಾರಂಭಿಸಿದರು. ಮುಂದೆ ಕಾರಟಗಿ ಹತ್ತಿರದ ಸೋಮನಾಳ ಗ್ರಾಮದವರಾದ ಆಯುರ್ವೇದದಲ್ಲಿ ಎಂ.ಡಿ ಪದವಿ ಪಡೆದ ಡಾ. ಸೌಮ್ಯಶ್ರೀಯವರನ್ನು ವಿವಾಹವಾಗಿ ದಂಪತಿಗಳಿಬ್ಬರೂ ಸೇರಿ ಜನ ಸೇವೆಯ ಕಾಯಕದಲ್ಲಿ ತೊಡಗಿದರು.
ಕಳೆದ 16 ವರ್ಷಗಳಿಂದ ಆಯುರ್ವೇದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಇವರು ಮೈಸೂರು ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಕಾಯಚಿಕಿತ್ಸೆಯಲ್ಲಿ ಎಂ.ಡಿ ಪದವಿ ಪಡೆದಿರುವುದರಿಂದ ಪಂಚಕರ್ಮ ಚಿಕಿತ್ಸೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನೀಡುತ್ತಾರೆ. ಪಾರ್ಶ್ವವಾಯು, ಚರ್ಮರೋಗ, ಸಂಧಿವಾತ, ಅಸಿಡಿಟಿ, ಕರಳು ಕಾಯಿಲೆಗಳು, ಗಾಲ್‌ಬ್ಲಾಡರ್ ಮತ್ತು ಕಿಡ್ನಿಸ್ಟೋನ್ ಮುಂತಾದ ರೋಗಗಳನ್ನು ಅಲೋಪಥಿ ಪದ್ಧತಿಯನ್ನು ಅನುಸರಿಸದೇ ಶುದ್ಧವಾದ ಆಯುರ್ವೇದ ಪದ್ಧತಿಯಿಂದಲೇ ಗುಣಪಡಿಸುತ್ತಾ ಬಂದಿರುವುದು ಇವರ ಹೆಗ್ಗಳಿಕೆಯಾಗಿದೆ. ಇವರು ಸಾವಿರಾರು ರೋಗಿಗಳನ್ನು ಗುಣಮುಖರನ್ನಾಗಿ ಮಾಡಿದ್ದಾರೆ.
ತಮ್ಮ 16 ವರ್ಷಗಳ ನಿರಂತರ ವೈದ್ಯಕೀಯ ಸೇವೆಯ ಜೊತೆಗೆ ಅಧ್ಯಯನಶೀಲರೂ, ಸಂಶೋಧನಾಸಕ್ತರೂ ಆಗಿರುವ ಡಾ. ಹಿರೇಮಠರವರು ದೇಶದ ವಿವಿಧ ಪ್ರದೇಶಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿವಿಧ ಆಯುರ್ವೇದ ಸಮ್ಮೇಳನಗಳಲ್ಲಿ ಉಪನ್ಯಾಸಕರಾಗಿ, ನಿರ್ಣಾಯಕರಾಗಿ ಪಾಲ್ಗೊಂಡಿದ್ದಾರೆ. ನೂರಾರು ಪ್ರಬಂಧಗಳನ್ನು ಮಂಡಿಸಿ ಜಾಗತಿಕ ಮನ್ನಣೆ ಪಡೆದಿದ್ದಾರೆ.
ಹೀಗೆ ನಿರಂತರವಾದ ಆಯುರ್ವೇದ ಕ್ಷೇತ್ರದ ತಮ್ಮ ಸಾಧನೆ-ಸೇವೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ತಮ್ಮ ಸ್ನಾತಕೋತ್ತರ ಪದವಿ ಅಧ್ಯಯನ ಸಂದರ್ಭದಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಜಿಜ್ಞಾಸು ಸಮ್ಮೇಳನದಲ್ಲಿ ಉತ್ತಮ ಪ್ರಬಂಧ ಮಂಡಿಸಿದ್ದಕ್ಕಾಗಿ “ಜಿಜ್ಞಾಸು” ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಯೋಗದ ಬಗೆಗೂ ವಿಶೇಷ ಪರಿಣಿತಿ ಮತ್ತು ಆಸಕ್ತಿ ಹೊಂದಿರುವ ಇವರು ಯೋಗದಲ್ಲಿ ವಿಶಿಷ್ಟ ಸಾಧನೆಗೆ ‘ಯೋಗ ಪ್ರಬೋಧಿನಿ’ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಡಾ. ಮಹೇಶ ಹಿರೇಮಠರ ಮತ್ತೊಂದು ವಿಶೇಷತೆಯೆಂದರೆ, ನಾಡಿ ನೋಡಿ ಗುಣ ಪಡಿಸುವ ಅವರ ಕೌಶಲ್ಯ. ರೋಗ ನಿಧಾನ ತಂತ್ರಗಾರಿಕೆಯಲ್ಲಿ ಪಾರಂಪರಿಕ ವೈದ್ಯ ಪದ್ಧತಿಯಂತೆ ನಾಡಿ ನೋಡಿಯೇ ರೋಗದ ಗುಣಲಕ್ಷಣವನ್ನು ನಿರ್ಧರಿಸುತ್ತಾರೆ. “ವಿಶ್ವಾಸೋ ಫಲದಾಯಕ” ಎಂಬ ನುಡಿಯಂತೆ ಸದಾ ಹಸನ್ಮುಖಿಯಾಗಿ ಪ್ರೀತಿ, ಅಂತಃಕರಣ, ಕಕ್ಕುಲತೆಯಿಂದ ರೋಗಿಗಳನ್ನು ಮಾತನಾಡಿಸಿ ತಮ್ಮ ಮಾತಿನಿಂದಲೇ ಅರ್ಧ ರೋಗ, ಔಷಧಿಗಳಿಂದ ಅರ್ಧ ರೋಗ ಗುಣಮುಖಪಡಿಸುವುದು ಇವರ ವೈಶಿಷ್ಟ್ಯತೆಯಾಗಿದೆ. ಚಿಕಿತ್ಸೆಯಲ್ಲಿ ಔಷಧದ ಸೇವನೆ ಅತ್ಯಂತ ಪ್ರಮುಖವಾಗಿರುತ್ತದೆ. ಹೀಗಾಗಿ ಡಾ. ಹಿರೇಮಠ ದಂಪತಿಗಳು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ರಥ ಸಪ್ತಮಿಯ ಶುಭದಿನದಂದು `ಹಿರೇಮಠ ನ್ಯಾಚರಲ್ಸ್’ ನೈಸರ್ಗಿಕ ಆಹಾರ ಉತ್ಪನ್ನಗಳ ಘಟಕದ ಉದ್ಘಾಟನೆಯೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದಾರೆ.
-
ಡಾ. ಡಿ.ಎಲ್. ಪಾಟೀಲ (ಗದಗ)



