ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ: ಸಾಧಿಸುವ ಛಲ, ತಾಳ್ಮೆ ಮತ್ತು ಪರಸ್ಪರ ನಂಬಿಕೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ನಮ್ಮ ಸಂಘದ ಯಶಸ್ಸಿಗೆ ಇದು ಅತ್ಯುತ್ತಮ ಉದಾಹರಣೆ. ಈಗಾಗಲೇ ಸಾಧಿಸಿರುವುದು ಬಹಳಷ್ಟಿದ್ದರೆ, ಸಾಧಿಸಬೇಕಿರುವುದು ಇನ್ನೂ ಬೆಟ್ಟದಷ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ನೌಕರರ ಸಲಹೆ ಮತ್ತು ಸಹಕಾರವು ಈ ದಿಶೆಯಲ್ಲಿ ಅತ್ಯಗತ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪಂಚಾಯತ ರಾಜ್ ವಿಭಾಗದ ಅಧಿಕಾರಿಗಳು ಹಾಗೂ ನೌಕರರ ಸಂಘದ ರಾಜ್ಯಾಧ್ಯಕ್ಷ ಬಸವರಾಜ್ ಹೆಚ್ ಹೇಳಿದರು.
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂಘದ 2025-26ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಶೇ.75ಕ್ಕೂ ಹೆಚ್ಚು ಲಿಪಿಕ ಹುದ್ದೆಗಳು ಖಾಲಿಯಿದ್ದರೂ, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ವಿಳಂಬವಿಲ್ಲದೇ ಕೆಲಸ ನಿರ್ವಹಿಸುತ್ತಿದ್ದಾರೆ. ಖಾಲಿಯಿರುವ ಸಾವಿರಾರು ಹುದ್ದೆಗಳನ್ನು ಜರೂರಾಗಿ ಭರ್ತಿ ಮಾಡಲು ಸರ್ಕಾರದ ಗಮನವನ್ನು ಸೆಳೆಯಲಾಗುವುದು. ವಿವಿಧ ಸರ್ಕಾರಿ ನೌಕರರ ಜ್ಯೇಷ್ಠತೆ, ಮುಂಬಡ್ತಿ, ಹುದ್ದೆಗಳ ಉನ್ನತೀಕರಣ ಮತ್ತು ಮುಂಬಡ್ತಿಗೆ ನಿಗದಿಪಡಿಸಿರುವ ಅರ್ಹತಾ ಅವಧಿಯಲ್ಲಿ ಆಗಿರುವ ತಾರತಮ್ಯವನ್ನು ಹೋಗಲಾಡಿಸಲು ಸಂಘದ ಹೋರಾಟವು ಅಚಲವಾಗಿದ್ದು, ಸರ್ಕಾರದ ವಿಶ್ವಾಸವನ್ನು ಪಡೆದು ತಾರತಮ್ಯವನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜ್ ಸಿ.ಸಜ್ಜನಶೆಟ್ಟರ್ ಮಾತನಾಡಿ, ಸಂಘದ ಅಧ್ಯಕ್ಷ ಬಸವರಾಜ್ ಹೆಚ್ ಮಾರ್ಗದರ್ಶನದಲ್ಲಿ 15-20 ವರ್ಷಗಳಿಂದ ಪದೋನ್ನತಿಯಿಲ್ಲದೇ ಸೊರಗಿದ್ದ ನೂರಾರು ನೌಕರರಿಗೆ 2020ರಲ್ಲಿ ರಚಿತವಾದ ವೃಂದ ಮತ್ತು ನೇಮಕಾತಿ ನಿಯಮಗಳ ಮೂಲಕ ಪದೋನ್ನತಿಯ ದಾರಿ ತೆರೆದಿದ್ದನ್ನು ಶ್ಲಾಘಿಸಿದರು.
ತಿಪ್ಪೇಸ್ವಾಮಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಭೈರೇಶ್ ವ್ಹಿ.ಎಸ್ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ತಿಮ್ಮನಾಯ್ಕರ್, ಜಯಪ್ರಕಾಶ್ ಚವ್ಹಾಣ್, ಡಿ. ಲಕ್ಷ್ಮೀಕಾಂತ, ಖಜಾಂಚಿ ಬಾಪುಗೌಡ ಪಾಟೀಲ್ ಸೇರಿದಂತೆ ನೂರಾರು ಅಧಿಕಾರಿಗಳು ಮತ್ತು ನೌಕರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಹೊಸದಾಗಿ ನೇಮಕಗೊಂಡ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಚಿತ್ರದುರ್ಗ ಜಿ.ಪಂ ಕಾರ್ಯಾಲಯದ ಸಹಾಯಕ ನಿರ್ದೇಶಕ ದಾದಾಪೀರ್, ವ್ಯವಸ್ಥಾಪಕ ಸುನೀಲ್, ಷಣ್ಮುಖ ಮತ್ತು ಇತರ ನೌಕರರನ್ನು ಸಂಘದ ವತಿಯಿಂದ ಗೌರವಿಸಲಾಯಿತು.



