HomeArt and Literatureಹಿಂದೂ ಸ್ವರಾಜ್ಯದ ಅಪ್ರತಿಮ ವೀರ ಶಿವಾಜಿ ಮಹಾರಾಜ್!

ಹಿಂದೂ ಸ್ವರಾಜ್ಯದ ಅಪ್ರತಿಮ ವೀರ ಶಿವಾಜಿ ಮಹಾರಾಜ್!

For Dai;y Updates Join Our whatsapp Group

Spread the love

ಭಾರತದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅದರಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟ ಹೆಸರು ಛತ್ರಪತಿ ಶಿವಾಜಿ ಮಹಾರಾಜ'. ಅವರು ಕೇವಲ ಒಬ್ಬ ರಾಜನಾಗಿರಲಿಲ್ಲ, ಬದಲಿಗೆ ಭಾರತೀಯರ ಸ್ವಾಭಿಮಾನದ ಸಂಕೇತವಾಗಿದ್ದರು. ಮೊಘಲರ ಮತ್ತು ಆದಿಲ್ ಶಾಹಿಗಳ ದಬ್ಬಾಳಿಕೆಯಲ್ಲಿ ನಲುಗುತ್ತಿದ್ದ ಜನರಿಗೆ ಸ್ವರಾಜ್ಯ’ದ ಕನಸು ತೋರಿಸಿ, ಅದನ್ನು ನನಸು ಮಾಡಿದ ಧೀಮಂತ ನಾಯಕ ಶಿವಾಜಿ.

ಶಿವಾಜಿಯವರ ವ್ಯಕ್ತಿತ್ವ ರೂಪಿತವಾಗಿದ್ದು ಅವರ ಬಾಲ್ಯದಲ್ಲಿಯೇ. ಪುಣೆಯ ಶಿವನೇರಿ ಕೋಟೆಯಲ್ಲಿ 1630ರಲ್ಲಿ ಜನಿಸಿದ ಶಿವಾಜಿಗೆ, ತಾಯಿ ಜೀಜಾಬಾಯಿಯೇ ಮೊದಲ ಗುರು. ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಾ, ಅನ್ಯಾಯದ ವಿರುದ್ಧ ಹೋರಾಡುವ ಕೆಚ್ಚೆದೆಯನ್ನು ತಾಯಿಯೇ ಮಗನ ಮನಸ್ಸಿನಲ್ಲಿ ಬಿತ್ತಿದರು. ತಂದೆ ಶಹಾಜಿರಾಜೆ ಭೋಸ್ಲೆ ದೂರದ ಊರಿನಲ್ಲಿದ್ದರೂ, ತಾಯಿ ಜೀಜಾಬಾಯಿ ಮತ್ತು ಗುರು ದಾದಾಜಿ ಕೊಂಡದೇವ ಅವರ ಮಾರ್ಗದರ್ಶನದಲ್ಲಿ ಶಿವಾಜಿ ಒಬ್ಬ ಅಪ್ರತಿಮ ಯೋಧನಾಗಿ ಬೆಳೆದರು.

ಶಿವಾಜಿ ಮಹಾರಾಜರು ತಮ್ಮ 16ನೇ ವಯಸ್ಸಿನಲ್ಲಿಯೇ ತೋರಣ ಕೋಟೆಯನ್ನು ಗೆಲ್ಲುವ ಮೂಲಕ ಸ್ವರಾಜ್ಯ ಸ್ಥಾಪನೆಯ ಮೊದಲ ಹೆಜ್ಜೆ ಇಟ್ಟರು. ಅವರ ಬಳಿ ಬೃಹತ್ ಸೈನ್ಯವಿರಲಿಲ್ಲ. ಆದರೆ ಬುದ್ಧಿವಂತಿಕೆ ಇತ್ತು. ಸಹ್ಯಾದ್ರಿ ಬೆಟ್ಟಗಳ ಭೌಗೋಳಿಕ ರಚನೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರು. ಇದನ್ನೇ ಇತಿಹಾಸದಲ್ಲಿ `ಗನಿಮಿ ಕಾವಾ’ ಎಂದು ಕರೆಯಲಾಗುತ್ತದೆ. ಹಠಾತ್ ದಾಳಿ ಮಾಡುವುದು ಮತ್ತು ಶತ್ರುಗಳು ಚೇತರಿಸಿಕೊಳ್ಳುವ ಮುನ್ನವೇ ಮಾಯವಾಗುವುದು ಅವರ ತಂತ್ರವಾಗಿತ್ತು.

ಶಿವಾಜಿಯವರ ಜೀವನದಲ್ಲಿ ಅಫಜಲ್ ಖಾನ್ ನೊಂದಿಗಿನ ಮುಖಾಮುಖಿ ರೋಚಕವಾದದ್ದು. ಬಿಜಾಪುರದ ಬಲಿಷ್ಠ ಸೇನಾಪತಿ ಅಫಜಲ್ ಖಾನ್, ಶಿವಾಜಿಯನ್ನು ಕೊಲ್ಲಲು ಬಂದಾಗ, ಶಿವಾಜಿ ತಮ್ಮ ಬುದ್ಧಿವಂತಿಕೆಯಿಂದ ‘ವ್ಯಾಘ್ರ ನಖ’ (ಹುಲಿಯ ಉಗುರು) ಬಳಸಿ ಆತನನ್ನು ಸಂಹರಿಸಿದರು. ಇದು ಕೇವಲ ದೈಹಿಕ ಬಲದ ಪ್ರದರ್ಶನವಾಗಿರದೆ, ಸಮಯಪ್ರಜ್ಞೆ ಮತ್ತು ಎಚ್ಚರಿಕೆಯ ಪಾಠವಾಗಿತ್ತು.

ಔರಂಗಜೇಬನು ಒಪ್ಪಂದದ ನೆಪದಲ್ಲಿ ಶಿವಾಜಿಯನ್ನು ಆಗ್ರಾಕ್ಕೆ ಕರೆಸಿ ಬಂಧಿಸಿದನು. ಆದರೆ, ಚಾಣಾಕ್ಷ ಶಿವಾಜಿ ಅನಾರೋಗ್ಯದ ನಾಟಕವಾಡಿ, ಸಿಹಿ ಹಂಚುವ ನೆಪದಲ್ಲಿ ಹಣ್ಣಿನ ಬುಟ್ಟಿಗಳಲ್ಲಿ ಕುಳಿತು ಅಲ್ಲಿಂದ ಪಾರಾದರು. ಈ ಘಟನೆ ಮೊಘಲ್ ಸಾಮ್ರಾಜ್ಯಕ್ಕೆ ದೊಡ್ಡ ಅವಮಾನ ಮತ್ತು ಮರಾಠರಿಗೆ ದೊಡ್ಡ ಗೆಲುವಾಯಿತು.

1674ರಲ್ಲಿ ರಾಯಗಡದಲ್ಲಿ ಶಿವಾಜಿಯವರಿಗೆ ಪಟ್ಟಾಭಿಷೇಕವಾಯಿತು. ಅವರು `ಛತ್ರಪತಿ’ ಎಂದು ಘೋಷಿಸಿಕೊಂಡರು. ಇದು ಕೇವಲ ಒಬ್ಬ ವ್ಯಕ್ತಿಯ ಪಟ್ಟಾಭಿಷೇಕವಾಗಿರಲಿಲ್ಲ, ಶತಮಾನಗಳ ಪರಕೀಯರ ಆಳ್ವಿಕೆಯ ನಂತರ ಹಿಂದೂ ಸಾಮ್ರಾಜ್ಯವೊಂದು ತಲೆ ಎತ್ತಿ ನಿಂತ ಐತಿಹಾಸಿಕ ಕ್ಷಣವಾಗಿತ್ತು.

ಶಿವಾಜಿ ಕೇವಲ ಯುದ್ಧವೀರನಾಗಿರದೆ, ಒಬ್ಬ ದಕ್ಷ ಆಡಳಿತಗಾರನೂ ಆಗಿದ್ದರು. ರಾಜ್ಯಭಾರವನ್ನು ಸುಗಮವಾಗಿ ನಡೆಸಲು ಎಂಟು ಜನ ಮಂತ್ರಿಗಳಿದ್ದ ಅಷ್ಟಪ್ರಧಾನ ಮಂಡಲವನ್ನು ರಚಿಸಿದರು. ಸಮುದ್ರದ ಮೇಲಿನ ಹಿಡಿತದ ಮಹತ್ವವನ್ನು ಅರಿತ ಮೊದಲ ಭಾರತೀಯ ರಾಜ ಶಿವಾಜಿ. ಸಿಂಧುದುರ್ಗದಂತಹ ಜಲದುರ್ಗಗಳನ್ನು ಕಟ್ಟಿ, ಬಲಿಷ್ಠ ನೌಕಾಪಡೆಯನ್ನು ಸ್ಥಾಪಿಸಿದ ಅವರನ್ನು ಭಾರತೀಯ ನೌಕಾಪಡೆಯ ಪಿತಾಮಹ’ ಎಂದು ಕರೆಯಲಾಗುತ್ತದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ರೈತರಿಂದ ನೇರವಾಗಿ ಕಂದಾಯ ಸಂಗ್ರಹಿಸುವ ಪದ್ಧತಿ ಜಾರಿಗೆ ತಂದರು. ಬರಗಾಲದ ಸಮಯದಲ್ಲಿ ರೈತರಿಗೆ ಧಾನ್ಯ ಮತ್ತು ಸಾಲದ ನೆರವು ನೀಡುತ್ತಿದ್ದರು. ಯುದ್ಧದಲ್ಲಿ ಶತ್ರುಗಳ ಕೋಟೆಯನ್ನು ಗೆದ್ದಾಗ, ಅಲ್ಲಿ ಸಿಗುವ ಮಹಿಳೆಯರನ್ನು ಅತ್ಯಂತ ಗೌರವದಿಂದ, ತಾಯಿಯಂತೆ ಕಂಡು ಅವರನ್ನು ಸುರಕ್ಷಿತವಾಗಿ ಅವರ ಮನೆಗೆ ಕಳುಹಿಸುತ್ತಿದ್ದರು. ಅವರ ಸೈನ್ಯದಲ್ಲಿ ಮಹಿಳೆಯರಿಗೆ ಅಗೌರವ ತೋರುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು. ಮಹಾರಾಜರು ಹಿಂದೂ ಧರ್ಮದ ರಕ್ಷಕರಾಗಿದ್ದರು.

1680ರಲ್ಲಿ ಶಿವಾಜಿ ಮಹಾರಾಜರು ದೈವಾಧೀನರಾದರು. ಆದರೆ ಅವರು ಬೆಳಗಿಸಿದ ಸ್ವರಾಜ್ಯದ ಜ್ಯೋತಿ ನಂದಲಿಲ್ಲ. ಅವರ ಮರಣದ ನಂತರವೂ ಮರಾಠರು ಅದೇ ಸ್ಫೂರ್ತಿಯಿಂದ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ದುರ್ಬಲಗೊಳಿಸಿದರು. ಇಂದಿಗೂ ಛತ್ರಪತಿ ಶಿವಾಜಿ ಮಹಾರಾಜರು ಶಕ್ತಿ, ಯುಕ್ತಿ ಮತ್ತು ದೇಶಭಕ್ತಿಯ ಮೂರ್ತರೂಪವಾಗಿದ್ದಾರೆ. ಕಠಿಣ ಪರಿಸ್ಥಿತಿಗಳಲ್ಲಿಯೂ ಹೇಗೆ ಎದೆಗುಂದದೆ ಹೋರಾಡಬೇಕು ಎಂಬುದಕ್ಕೆ ಶಿವಾಜಿ ಮಹಾರಾಜರ ಜೀವನವೇ ಒಂದು ತೆರೆದ ಪುಸ್ತಕ. ಅವರ ಆದರ್ಶಗಳು ಇಂದಿನ ಯುವಪೀಳಿಗೆಗೆ ದಾರಿದೀಪ.

  • ಹನುಮಂತ ಬೆಂತೂರ.
    ಅಪ್ರೆಂಟಿಸ್, ವಾರ್ತಾ ಮತ್ತು ಸಾ.ಸಂ.ಇಲಾಖೆ-ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!