ಯಾದಗಿರಿ: ಪೋಕ್ಸೋ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಮಲ್ಲಿಕಾರ್ಜುನ ಮುತ್ಯಾ ಸಂಬಂಧಿಸಿದಂತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಜ್ಞಾತ ಸ್ಥಳದಲ್ಲಿರುವ ಮುತ್ಯಾ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಬೆನ್ನಲ್ಲೇ, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿರುವ ಬಾಲಕಿಯ ಪೋಷಕರೂ ತಮ್ಮ ಆವೃತ್ತಿಯನ್ನು ಸಾರ್ವಜನಿಕಗೊಳಿಸಿದ್ದಾರೆ.
ಪೋಷಕರ ಪ್ರಕಾರ, ಅವರು ಹಲವು ವರ್ಷಗಳಿಂದ ಮಲ್ಲಿಕಾರ್ಜುನ ಮುತ್ಯಾ ಅವರ ಭಕ್ತರಾಗಿದ್ದು, ಮಗಳ ಹುಟ್ಟುಹಬ್ಬದ ದಿನ ಆಶೀರ್ವಾದ ಪಡೆಯಲು ಮಠಕ್ಕೆ ತೆರಳಿದ್ದರು. ಆಶೀರ್ವಾದದ ಕ್ಷಣವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೇವೆ. ಆದರೆ ಅದನ್ನು ಕಿಡಿಗೇಡಿಗಳು ತಿರುಚಿ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಮುತ್ಯಾ ವಿರುದ್ಧದ ಆರೋಪಗಳನ್ನು ನಾವು ಒಪ್ಪುವುದಿಲ್ಲ ಎಂದು ಪೋಷಕರು ಹೇಳಿದ್ದಾರೆ.
ಇದೀಗ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಮುಂದಿನ ಬೆಳವಣಿಗೆಗಳತ್ತ ಸಾರ್ವಜನಿಕರ ಗಮನ ನೆಟ್ಟಿದೆ.



