ಚಾಮರಾಜನಗರ: ಲಿಂಗದೀಕ್ಷೆ ಪಡೆದು ಮಠಾಧೀಶರಾಗಿ ಧಾರ್ಮಿಕ ಸೇವೆ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೂಲ ಧರ್ಮವನ್ನು ಮರೆಮಾಚಿದ ವಿಚಾರದ ಕುರಿತು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ಅವರು ಪೀಠತ್ಯಾಗ ಮಾಡಿ ಮಠವನ್ನು ತೊರೆದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಮೂಲತಃ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಲಿಂಗದೀಕ್ಷೆ ಪಡೆದು ಮಠಾಧೀಶರಾಗಿದ್ದರು. ಆದರೆ ಅವರು ತಮ್ಮ ಮೂಲಧರ್ಮದ ಕುರಿತು ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೇ, ದಾಖಲೆಗಳಲ್ಲೂ ಸಹ ಹಿಂದಿನ ಧರ್ಮದ ವಿವರವನ್ನು ತಿದ್ದದೆ ಇರಲಾಗಿದೆ ಎಂದು ಆರೋಪ ಕೇಳಿಬಂದಿವೆ. ಈ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದ ನಂತರ, ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಸ್ವಾಮೀಜಿ ಪೀಠತ್ಯಾಗ ಮಾಡಿ ಮಠದಿಂದ ಹೊರ ನಡೆದಿದ್ದಾರೆ.
ಯಾದಗಿರಿ ಜಿಲ್ಲೆ ಶಹಪುರ ಮೂಲದ ನಿಜಲಿಂಗ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರು. ಪೂರ್ವಾಶ್ರಮದಲ್ಲಿ ಇವರ ಹೆಸರು ಮಹಮದ್ ನಿಸಾರ್ ಎಂದು ಇತ್ತು. ಮಹಮದ್ ನಿಸಾರ್ ಅವರು ವಿಶ್ವಗುರು ಬಸವಣ್ಣನವರ ತತ್ವ ಚಿಂತನೆಗಳಿಂದ ಪ್ರಭಾವಿತರಾಗಿ ಕಳೆದ ವರ್ಷ ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿಯಿಂದ ಜಂಗಮ ದೀಕ್ಷೆ ಪಡೆದಿದ್ದರು. ಲಿಂಗದೀಕ್ಷೆ ಪಡೆದ ಬಳಿಕ ಮಹಮದ್ ನಿಸಾರ್ ಅವರಿಗೆ ನಿಜಲಿಂಗ ಸ್ವಾಮೀಜಿ ಅಂತ ಮರುನಾಮಕರಣ ಮಾಡಲಾಗಿತ್ತು.
ಬಸವ ತತ್ವ ಪ್ರಚಾರಕರಾಗಿದ್ದ ನಿಜಲಿಂಗ ಸ್ವಾಮೀಜಿ ಅವರನ್ನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಚೌಡಹಳ್ಳಿ ಗ್ರಾಮದಲ್ಲಿನ ಗುರುಮಲ್ಲೇಶ್ವರ ಶಾಖಾಮಠಕ್ಕೆ ಪೀಠಾಧಿಪತಿ ಮಾಡಲಾಗಿತ್ತು. ಶಾಖಾಮಠ ಮಠದ ನೂತನ ಕಟ್ಟಡ ಕಟ್ಟಿಸಿದ್ದ ಮಹದೇವ ಪ್ರಸಾದ್ ಎಂಬುವರು ಒಂದುವರೆ ತಿಂಗಳ ಹಿಂದೆ ಸ್ವಾಮೀಜಿಯೊಬ್ಬರ ಶಿಫಾರಿಸ್ಸಿನ ಮೇರೆಗೆ ನಿಜಲಿಂಗ ಸ್ವಾಮೀಜಿ ಅವರನ್ನು ಕರೆತಂದು ಮಠಾಧೀಶರನ್ನಾಗಿ ಮಾಡಿದ್ದರು.
ಕಳೆದ ಒಂದುವರೆ ತಿಂಗಳಿಂದ ಚೌಡಹಳ್ಳಿಯ ಗುರುಮಲ್ಲೇಶ್ವರ ಮಠದಲ್ಲಿ ಪ್ರವಚನ ಧಾರ್ಮಿಕ ಕಾರ್ಯ ನಡೆಸಿಕೊಂಡು ಬರುತ್ತಿದ್ದರು. ನಿಜಲಿಂಗ ಸ್ವಾಮೀಜಿ ತಾವು ಮೂಲತಃ ಮುಸ್ಲಿಂ ಧರ್ಮದ ವ್ಯಕ್ತಿ ಎಂಬುದನ್ನು ಗ್ರಾಮಸ್ಥರಿಗೆ ತಿಳಿಸಿರಲಿಲ್ಲ. ಆದರೆ, ಮಠದ ಭಕ್ತರೊಬ್ಬರಿಗೆ ತಮ್ಮ ಮೊಬೈಲ್ ನೀಡಿದ್ದ ಸಂದರ್ಭದಲ್ಲಿ ಸತ್ಯ ಬಯಲಾಗಿತ್ತು.
ಭಕ್ತ ಸ್ವಾಮೀಜಿಯ ಮೊಬೈಲ್ನಲ್ಲಿನ ಎಸ್ಎಸ್ಎಲ್ಸಿ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ನೋಡಿದಾಗ, ಅದರಲ್ಲಿ ನಿಸಾರ್ ಮಹಮದ್ ಎಂದು ಇತ್ತು. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ವಾಮೀಜಿಯ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೂಲತಃ ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬುವುದನ್ನು ಮುಚ್ಚಿಟ್ಟಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.