ಶರಣರ ವಚನ ಬದುಕಿನ ದಾರಿದೀಪ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಬಸವಾದಿ ಶರಣರ ವಚನಗಳು ಬದುಕಿಗೆ ದಾರಿದೀಪವಿದ್ದಂತೆ. ವಚನಗಳನ್ನು ಓದುವುದು ಮಾತ್ರವಲ್ಲ, ಅವುಗಳನ್ನು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾನತೆಯ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

Advertisement

ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿ ಗವಿಮಠದಲ್ಲಿ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಾಗೂ ಮುಳಗುಂದ ಶರಣ ಸಾಹಿತ್ಯ ಪರಿಷತ್ತು ಕದಳಿ ವೇದಿಕೆ ವತಿಯಿಂದ ಮನೆ–ಮನದಲ್ಲಿ ‘ಶರಣರ ಸಂಸ್ಕೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜೀವನದ ಮೌಲ್ಯಗಳು ನಶಿಸುತ್ತಿರುವ ಸಂದರ್ಭದಲ್ಲಿ 12ನೇ ಶತಮಾನದ ಶರಣ–ಶರಣೆಯರ ವಚನಗಳು ಮನೆ–ಮನಗಳಲ್ಲಿ ಬೆಳಗುವ ಕಾರ್ಯವಾಗಬೇಕಾಗಿದೆ. ವಚನ ಸಾಹಿತ್ಯ ಬೆಳಕು, ಬೆಡಗು, ಬೆರಗು ಶಕ್ತಿಗಳನ್ನು ಹೊಂದಿದ್ದು, ಪ್ರತಿಯೊಬ್ಬರ ಬದುಕು ಬೆಳಕಾಗಲು ಮನೆ–ಮನಗಳಲ್ಲಿ ವಚನ ಸಾಹಿತ್ಯ ಪಠಿಸಲು ಸಾಧ್ಯವಾಗಬೇಕು ಎಂದರು.

ಡಾ. ಎಸ್.ಸಿ. ಚವಡಿ ಮಾತನಾಡಿ, ಶರಣರು ಕಾಯಕ ತತ್ವ ಪರಿಪಾಲಕರು. ಕಾಯಕದಲ್ಲಿ ನಿರತರಾದರೆ ಎಲ್ಲವೂ ಫಲಿಸುತ್ತದೆ ಎಂದವರು ಶರಣರು. ಶರಣರ ಚಿಂತನೆ–ಮಂಥನ ನಿತ್ಯಜೀವನದಲ್ಲಿ ಪಾಲಿಸಬೇಕು. ಮಕ್ಕಳಲ್ಲಿ ಶರಣ ತತ್ವಗಳನ್ನು, ವಚನಗಳನ್ನು ನಿತ್ಯ ಬೋಧಿಸಬೇಕು ಎಂದರು.

ಕದಳಿ ವೇದಿಕೆಯ ಅಧ್ಯಕ್ಷೆ ರಾಜೇಶ್ವರಿ ಬಡ್ನಿ ಲಿಂಗಪೂಜೆ, ವಚನಗಾಯನ, ವಿಭೂತಿ ಧಾರಣೆಯ ಮಹತ್ವವನ್ನು ತಿಳಿಸಿಕೊಟ್ಟರು. ಹೋಬಳಿ ಘಟಕದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಮಟ್ಟಿ, ಗದಗ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಭೂದಪ್ಪ ಅಂಗಡಿ, ಪ್ರಕಾಶ ಮದ್ದಿನ, ಸುಮನ ಚವಡಿ, ಹರ್ಷಲತಾ ದೇಶಪಾಂಡೆ, ಶೋಭಾ ಪಾಟೀಲ, ಶ್ವೇತಾ ದೋಟಿಕಲ್ಲ ಮುಂತಾದವರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here