ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶರಣರ ವಚನಗಳನ್ನ ಬರೀ ಮಾತನಾಡುವದಲ್ಲ, ಅವುಗಳನ್ನು ಪಾಲಿಸುತ್ತ ಸಮಾಜದಲ್ಲಿ ಸಮಾನತೆ, ಸಹೋದರತ್ವ, ಸಾಮರಸ್ಯದ ಬೆಸುಗೆಯೊಂದಿಗೆ ಬೆರೆತಾಗ ಇತರ ಜಾತಿ-ಧರ್ಮದವರೊಂದಿಗೆ ಕೂಡಿ ಬಾಳಲು ಸಾಧ್ಯ. ಇದಕ್ಕೆ ನಮ್ಮ ವಚನ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಬೆಂಗಳೂರು ಇದರ ರಾಜ್ಯಾಧ್ಯಕ್ಷ ಎನ್. ತಿಮ್ಮಪ್ಪ ನುಡಿದರು.
ಅವರು ನಗರದ ತಾ.ಪಂ ಸಭಾಂಗಣದಲ್ಲಿ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಬೆಂಗಳೂರು, ತಾಲೂಕು ಮತ್ತು ಜಿಲ್ಲಾ ಘಟಕ ಕೊಪ್ಪಳ, ವಿಶಾಲ ಪ್ರಕಾಶನ ಮಾದಿನೂರು, ಸಿರಿಗನ್ನಡ ವೇದಿಕೆ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ನೂತನ ತಾಲೂಕು, ಜಿಲ್ಲಾ ಘಟಕದ ಉದ್ಘಾಟನೆ, ಪುಸ್ತಕ ಬಿಡುಗಡೆ ಕಾರ್ಯಕ್ರಮ, `ಕಾಯಕ ರತ್ನ ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿ.ಎಸ್. ಗೋನಾಳರ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಗೋನಾಳರು ತಮ್ಮ ನಿಷ್ಠುರವಾದ ಬರಹದ ಮೂಲಕ ಜನರನ್ನು ಜಾಗೃತಗೊಳಿಸುವ ಬಹು ಎತ್ತರದ ಲೇಖಕರಾಗಿದ್ದು ಅವರನ್ನು ನಾನು ಸಾಹಿತ್ಯ ಸಾಮ್ರಾಟರೆಂದೇ ಕರೆಯುತ್ತೇನೆ. ಅವರ ಪುಸ್ತಕಗಳಲ್ಲಿರುವ ವಿಷಯಗಳು ರಾಜ್ಯ ಸರಕಾರದ ಪಠ್ಯ ಪುಸ್ತಕಗಳಲ್ಲಿ ದಾಖಲಾಗಬೇಕೆಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಷ. ಬ್ರ. 108 ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹಿರೇಮಠ ಮೈನಹಳ್ಳಿ ಬಿಕ್ಕನಹಳ್ಳಿ ವಹಿಸಿಕೊಂಡಿದ್ದರು. ಅಧ್ಯಕ್ಷತೆಯನ್ನು ಡಾ. ನಾಗರಾಜ್ ದಂಡೂತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ರಮೇಶ ಸುರ್ವೆ, ಅಬ್ದುಲ್ ರೇಹಮಾನ್ ಬಿದರಕುಂದಿ, ರುದ್ರಮ್ಮ ಆಸಿನಾಳ, ಬಸವರಾಜ ಪಾಲ್ಕಿ, ಮಹೇಶಬಾಬು ಸುರ್ವೆ, ವಿಜಯಕುಮಾರ ಕವಲೂರು ಉಪಸ್ಥಿತರಿದ್ದರು.
ಮಹಾಂತಯ್ಯ ಶಾಸ್ತ್ರಿ ಮತ್ತು ಕನಕಾಪುರ ಶಾಲೆಯ ಮಕ್ಕಳು ವಚನ ಗಾಯನಕ್ಕೆ ನೃತ್ಯ ರೂಪಕವನ್ನು ಮಾಡಿದರು. ಪ್ರಾಸ್ತಾವಿಕವಾಗಿ ಪ್ರೊ. ಶರಣಬಸಪ್ಪ ಬಿಳೆಯಲೆ ಮಾತನಾಡಿದರು. ಡಾ. ಶಿವಬಸಪ್ಪ ಮಸ್ಕಿ ಸ್ವಾಗತಿಸಿದರು, ಉಮೇಶ ಸುರ್ವೆ ಮತ್ತು ಸುರೇಶ ಕುಂಬಾರ ನಿರೂಪಿಸಿದರು. ಮೈಲಾರೆಪ್ಪ ಉಂಕಿ ವಂದಿಸಿದರು.
ಗದುಗಿನ ಭವಾನಿ ಪ್ರಿಂಟರ್ಸ್ ಮಾಲಕರಾದ ಗಣೇಶ ಪವಾರರಿಗೆ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 29 ಸಾಧಕರಿಗೆ `ಕಾಯಕರತ್ನ‘ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಧುನಿಕ ವಚನ ರಚನೆ ಸ್ಪಧೆಯಲ್ಲಿ ಭಾಗವಹಿಸಿದ 33 ವಚನಕಾರರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.