ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಗುರುವಿಗೆ ಶ್ರೇಷ್ಠ, ಪೂಜ್ಯನೀಯ ಸ್ಥಾನಮಾನವಿದ್ದು, ವ್ಯಕ್ತಿಯ ಬದುಕಿಗೆ ಶಿಕ್ಷಣ, ಜ್ಞಾನ, ಸಂಸ್ಕಾರ, ಸದ್ವಿಚಾರ, ಮಾನವೀಯ ಮೌಲ್ಯಗಳನ್ನು ಬಿತ್ತಿ ಉತ್ತಮ ನಾಗರಿಕರನ್ನಾಗಿ ಮಾಡಿದ ಗುರುಗಳು ಸದಾ ಸರಣೀಯರು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಒಡೆಯರ ಮಲ್ಲಾಪುರ ಮೊರಾರ್ಜಿ ವಸತಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಡಿ ನಡೆದ ಶ್ರೀ ಮೊರಾರ್ಜಿ ದೇಸಾಯಿಯವರ ಜನ್ಮ ದಿನಾಚರಣೆ, ಗುರುವಂದನೆ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಸಂಪತ್ತಿಗಿಂತ ಯಾರೂ ಕದಿಯಲಾರದ ವಿದ್ಯಾ ಸಂಪತ್ತು ಶ್ರೇಷ್ಠವಾಗಿದೆ. ಪ್ರತಿಯೊಬ್ಬ ತಂದೆ-ತಾಯಿ, ಶಿಕ್ಷಕರು ಮಕ್ಕಳ ಭವಿಷ್ಯದ ಬಗ್ಗೆ ಹತ್ತಾರು ಆಸೆ-ಕನಸು-ಭರವಸೆ ಕಂಡಿರುತ್ತಾರೆ. ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿ ಸಮಯ ವ್ಯರ್ಥ ಮಾಡದೇ ಶೃದ್ಧೆ, ಪ್ರಾಮಾಣಿಕತೆ, ಸತತಾಭ್ಯಾಸದಿಂದ ಉತ್ತಮ ಅಂಕ ಗಳಿಸಬೇಕು.
ಸರ್ಕಾರಗಳೂ ಹಿಂದುಳಿದ ವರ್ಗದ ಮತ್ತು ಬಡ ಮಕ್ಕಳ ಶಿಕ್ಷಣಕ್ಕಾಗಿ ಸಕಲ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ವಿದ್ಯಾರ್ಥಿಗಳು ಸೌಲಭ್ಯಗಳ ಸದುಪಯೋಗ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಕ್ಷೇತ್ರದಲ್ಲಿ ಶಾಲಾ-ಕಾಲೇಜು, ಹಾಸ್ಟೆಲ್‌ಗಳ ಅಭಿವೃದ್ಧಿಗೆ ಮೊದಲ ಆದ್ಯತೆಯ ಕಾರ್ಯ ಮಾಡುತ್ತೇನೆ ಎಂದರು.
ಜಿಲ್ಲಾ ಸಮನ್ವಯಾಧಿಕಾರಿ ಡಿ.ಬಿ. ಅಡವಿ, ಪ್ರಾಚಾರ್ಯೆ ಡಿ.ಸಿ. ನರೇಗಲ್, ಎಸ್.ಆರ್. ಶಿರಹಟ್ಟಿ, ರಾಜು ರಜಪೂತ, ಬಿ.ಎಸ್. ಶಿರಿಯಪ್ಪಗೌಡರ, ಕಿರಣ ನಾಯಕ, ನಾಗರಾಜ ಕಳಸಾಪುರ, ಎನ್.ಕೆ. ಹತ್ತಿಕಾಳ, ಆರ್.ಬಿ. ಉದ್ದಣ್ಣವರ, ಎನ್‌ಸಿಕೆ ಪಾಟೀಲ, ಎಸ್.ಐ. ಸುಗಣ್ಣವರ, ಎಸ್.ಜೆ. ಮಕಾಂದಾರ, ಎಸ್.ಸಿ. ಕೆರಿಮನಿ, ಚಂದ್ರಶೇಖರ ಪಾಟೀಲ, ಎಂ.ಆಯ್. ಡಂಬಳ, ಎಸ್.ಎನ್. ತಳ್ಳಳ್ಳಿ ಸೇರಿದಂತೆ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮಿಸಿದರು. ಸುಮಾ ಸಂಶಿ, ಗಣೇಶ ಚೌವ್ಹಾಣ, ಮಹೇಶ ತಳವಾರ, ಮಾಲತೇಶ ವರ್ದಿ ನಿರೂಪಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶರಣಯ್ಯ ಕುಲಕರ್ಣಿ ಮಾತನಾಡಿ, ಶಾಲಾ ದಿನಗಳು ಮಾನವನ ಸರ್ವಾಂಗೀಣ ವ್ಯಕ್ತಿತ್ವಕ್ಕೆ ಬುನಾದಿಯಾಗಿದ್ದು, ಮಾನವನ ಜೀವನದುದ್ದಕ್ಕೂ ಶಾಲಾ ದಿನಗಳ ನೆನಪು ಅಮರವಾಗಿರುತ್ತದೆ. ವಸತಿ ಶಾಲೆಗಳಲ್ಲಿ ಇಂದು ಪೂರ್ಣ ಪ್ರಮಾಣದ ಸೌಲಭ್ಯವುಳ್ಳ ಪರಿಪೂರ್ಣ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಓದುವ ಅವಕಾಶ ಪಡೆದ ನೀವೆಲ್ಲ ಧನ್ಯರು ಎಂದರು.