ಹಾವೇರಿ:- ಸತ್ತನೆಂದು ಊರಿಗೆ ಕರೆತರುವಾಗ ವ್ಯಕ್ತಿಯೋರ್ವ ಬದುಕುಳಿದ ವಿಚಿತ್ರ ಘಟನೆಯೊಂದು ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಜರುಗಿದೆ.
45 ವರ್ಷದ ಬಿಷ್ಣಪ್ಪ ಅಶೋಕ ಗುಡಿಮನಿ ಅಲಿಯಾಸ್ ಮಾಸ್ತರ್ ಬದುಕಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಳೆದ ಮೂರು-ನಾಲ್ಕು ದಿನಗಳ ಹಿಂದೆ ಬಿಳಿ ಕಾಮಾಲೆ ರೋಗದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಬಿಷ್ಟಪ್ಪ ಗುಡಿಮನಿ ಮೃತಪಟ್ಟಿದ್ದಾರೆ ಶವವನ್ನು ಊರಿಗೆ ತೆಗೆದುಕೊಂಡು ಹೋಗಿ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು.
ಕುಟುಂಬಸ್ಥರು ಮೃತ ಬಿಷ್ಟಪ್ಪ ಗುಡಿಮನಿ ಶವ ತೆಗೆದುಕೊಂಡು ಊರಿಗೆ ವಾಪಸು ಬರುತ್ತಿದ್ದ ವೇಳೆ, ದಾರಿಯಲ್ಲಿ ಅವರಿಗೆ ಇಷ್ಟವಾದ ಡಾಬಾ ಕಂಡಿದೆ. ಆಗ, ಕುಟುಂಬಸ್ಥರು ಡಾಬಾ ಬಂತು ನೋಡು, ಊಟ ಮಾಡುತ್ತೀಯಾ ಎಂದು ಗೋಳಾಡಿ ಕಣ್ಣೀರಿಟ್ಟಾಗ, ಮೃತ ಬಿಷ್ಟಪ್ಪ ಗುಡಿಮನಿ ಉಸಿರಾಡಿದ್ದಾರೆ.
ಬಳಿಕ, ಬಿಷ್ಟಪ್ಪ ಗುಡಿಮನಿಗೆ ಶಿಗ್ಗಾಂವಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು, ಬಿಷ್ಟಪ್ಪ ಗುಡಿಮನಿ ನಿಧನ ಸುದ್ದಿ ಕೇಳಿ ಗ್ರಾಮದಲ್ಲಿ ಬ್ಯಾನರ್ ಸಹ ಹಾಕಲಾಗಿತ್ತು. ವಾಟ್ಸಪ್ ಗ್ರೂಪ್ಗಳಲ್ಲಿ ಓಂ ಶಾಂತಿ ಎಂದು ಸಹ ಹಾಕಲಾಗಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಷ್ಟಪ್ಪ ಸಂಬಂಧಿ ಗಂಗಪ್ಪ ಗುಡಿಮನಿ ಪ್ರತಿಕ್ರಿಯೆ ನೀಡಿದ್ದು, ನಾಲ್ಕು ದಿವಸ ಹಿಂದೆ ದವಾಖಾನೆ ಹೋಗಿದ್ದರು. ನಾಲ್ಕೂ ದಿನಗಳಿಂದ ಡಾಕ್ಟರ್ ಟ್ರಿಟ್ಮೆಂಟ್ ಕೊಡ್ತಿದ್ದರು. ಅವರ ತಮ್ಮ ಅವರ ಜೊತೆನೆ ಇದ್ರು. ಆ ಬಳಿಕ ಡಾಕ್ಟರ್ ಗಳು ಆತ ಮೃತಪಟ್ಟಿದ್ದಾನೆ ತೆಗೆದುಕೊಂಡು ಹೋಗ್ರಿ ಅಂದ್ರು. ಹೀಗಾಗಿ ಅವರನ್ನ ತೆಗೆದುಕೊಂಡು ಬರಲಾಗುತ್ತಿತ್ತು. ಆದರೆ ದಾರಿ ಮಧ್ಯೆ ಆತನಿಗೆ ಉಸಿರಾಟ ಚಲು ಆಗೈತಿ. ಉಸಿರಾಟ ಆದ ಕೂಡಲೇ ಶಿಗ್ಗಾಂವಿ ಆಸ್ಪತ್ರೆಗೆ ಕರೆತರಲಾಗಿತ್ತು ಎಂದರು.
ಇನ್ನೂ ಸತ್ತನೆಂದು ತಿಳಿದು ಅಂತ್ಯಕ್ರಿಯೆಗೆ ಕಟ್ಟಿಗೆ ಹಾಕಿ, ಬ್ಯಾನರ್ ಸಹ ಹಾಕಿದ್ವಿ. ಅಮೇಲೆ ಬದುಕುಳಿದ ವಿಚಾರ ತಿಳಿದು ಎಲ್ಲವನ್ನೂ ಟೈರ್ ಹಾಕಿ ಸುಟ್ಟು ಬಿಟ್ಟೆವು ಎಂದಿದ್ದಾರೆ.
ಒಟ್ಟಾರೆ ವ್ಯಕ್ತಿಯು ಪವಾಡ ಎಂಬಂತೆ ಬದುಕುಳಿದಿದ್ದು, ಇದು ಪುನರ್ಜನ್ಮ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.