ವಿಜಯಸಾಕ್ಷಿ ಸುದ್ದಿ, ಡಂಬಳ: ಉನ್ನತ ಸ್ಥಾನಕ್ಕೇರಿದ ನಂತರ ಅದಕ್ಕೆ ಕಾರಣವಾದ ಏಣಿಯನ್ನು ಮರೆಯಬಾರದು ಎನ್ನುವ ಹಿನ್ನೆಲೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಪ್ರಗತಿಗೆ ನೆರವಾಗಬೇಕು. ದಾನಿಗಳು ಸರಕಾರಿ ಶಾಲೆಗೆ ಮಾನ್ಯತೆ ನೀಡುತ್ತಿರುವುದು ಪ್ರಶಂಸನೀಯ ಎಂದು ಮುಂಡರಗಿ ತಾಲೂಕು ಕ್ಷೇತ್ರ ಶಿಕ್ಷಾಣಾಧಿಕಾರಿ ಗಂಗಾಧರ ಅಣ್ಣಿಗೇರಿ ಹೇಳಿದರು.
ಡಂಬಳ ಹೋಬಳಿಯ ದಿಂಡೂರ ತಾಂಡ ಗ್ರಾಮದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ಆರ್.ಬಿ. ಹೊಸಕೇರಿ ಎಲ್ಲಾ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ 30 ಸಾವಿರ ರೂ ಮೌಲ್ಯದ ಬಟ್ಟೆ ಮತ್ತು ಬ್ಯಾಂಕ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್ಚರಸ್ವಾಮಿ ನಾಯಕ ಅವರು ಮಗ್ಗಿ-ಸುಗ್ಗಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ 5 ಸಾವಿರ ರೂ ಮೌಲ್ಯದ ಶಾಲಾ ಪರಿಕರ, ಗದಗ ನಗರದ ಬಟ್ಟೆ ವ್ಯಾಪಾರಸ್ಥ ಸುರೇಶ ಹಾವನೂರ ಕೊಡುಗೆ ನೀಡಿದ 25 ಊಟದ ತಟ್ಟೆ ಮತ್ತು ಶಿರಹಟ್ಟಿಯ ಸಿಆರ್‌ಪಿ ಎನ್.ಎನ್. ಸಾವಿರಕುರಿ ವಿದ್ಯಾರ್ಥಿಗಳಿಗೆ ಕೊಡಮಾಡಿದ ಟೈ ಮತ್ತು ಬೆಲ್ಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯೋಪಾಧ್ಯಾಯ ವಿನಾಯಕ ಹೊಸಮನಿ ಮಾತನಾಡಿ, ದಿಂಡು ತಾಂಡದಂತಹ ಕುಗ್ರಾಮದ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಬೇಕು ಮತ್ತು ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲ ಎಂದು ತೋರಿಸುವಂತೆ ಮಾಡಿರುವ ದಾನಿಗಳ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಹನಮಂತಪ್ಪ ಲಮಾಣಿ, ಉಪಾಧ್ಯಕ್ಷೆ ಸಕ್ಕುಬಾಯಿ ಲಮಾಣಿ, ಸದಸ್ಯರು, ಗ್ರಾ.ಪಂ ಸದಸ್ಯರು, ಕುಬೇರ ನಾಯಕ, ಅನ್ನಕ್ಕ ಭೀಮಸಿಂಗ ಲಮಾಣಿ, ಮುಖ್ಯೋಪಾಧ್ಯಾಯ ವಿನಾಯಕ ಹೊಸಮನಿ, ಮಂಜುನಾಥ ಭತ್ತಿಕೊಪ್ಪದ, ಬಿ.ಆರ್. ಗೌಡರ, ಶಿವಣ್ಣ ನಾಯಕ, ಚೇತನ ನಾಗನಗೌಡರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ನಿವೃತ್ತ ಮುಖ್ಯೋಪಾಧ್ಯಾಯ ಆರ್.ಬಿ. ಹೊಸಕೇರಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಬಡ ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಇತರ ವಿದ್ಯಾರ್ಥಿಗಳಂತೆ ಇವರು ಕೂಡ ಉತ್ತಮ ವಸ್ತ್ರ ತೊಡಲಿ, ನಿತ್ಯ ಶಾಲೆಗೆ ಬರಲಿ, ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎನ್ನುವ ಹಿತದೃಷ್ಟಿಯಿಂದ 98 ವಿದ್ಯಾರ್ಥಿಗಳಿಗೆ 30 ಸಾವಿರ ರೂ ಮೌಲ್ಯದ ಟೀಶರ್ಟ್, ಪ್ಯಾಂಟ್ ಒದಗಿಸಿದ್ದೇನೆ ಎಂದು ಹೇಳಿದರು.