ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕು ಚೆಲ್ಲುವ ಮೂಲಕ ಮನುಷ್ಯನ ಬಾಳಲ್ಲಿ ಹೊಸ ಚೈತನ್ಯ, ಹರುಷ ತರುವುದಕ್ಕಾಗಿ ಆಚರಿಸುವಂತಹ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಜಾನಪದ ಕಲೆ ಉಳಿಸಿ-ಬೆಳೆಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಹೇಳಿದರು.
ಅವರು ಶಿರಹಟ್ಟಿಯ ಶ್ರೀ ಬೀರೇಶ್ವರ ಸೇವಾ ಸಮಿತಿ ವತಿಯಿಂದ 20ನೇ ವರ್ಷದ ಶ್ರೀ ಬೀರೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಯುವ ಸಂಭ್ರಮದ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆ ಅದ್ಭುತವಾಗಿದೆ. ಮಕ್ಕಳು ಓದಿನ ಜೊತೆ ಜಾನಪದ ಕಲೆಯನ್ನು ಕಲಿಯಬೇಕು. ಹಳ್ಳಿ ಜನರ ನರ-ನಾಡಿಗಳಲ್ಲಿ ಜಾನಪದ ಕಲೆ ಹಾಸುಹೊಕ್ಕಾಗಿದೆ. ತಮ್ಮ ಸುಖ-ದುಃಖ, ಸುಗ್ಗಿಯ ಕ್ಷಣಗಳು ಮತ್ತು ಗ್ರಾಮೀಣ ಬದುಕಿನ ಸೊಗಡನ್ನು ಇಂದಿಗೂ ಜಾನಪದ ಹಾಡುಗಳಲ್ಲಿ ಕಾಣಲು ಸಾಧ್ಯ. ಆಧುನಿಕತೆಯ ಭರಾಟೆಯಲ್ಲಿ ಜಾನಪದ ಕಲೆ ಕಣ್ಮರೆಯಾಗುತ್ತಿದೆ. ನಶಿಸುತ್ತಿರುವ ಜಾನಪದ ಕಲೆ, ಕಲಾವಿದರ ಉಳಿವಿಗಾಗಿ ಸತತ 20 ವರ್ಷದಿಂದ ಶ್ರೀ ಬೀರೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಅದ್ಧೂರಿ ಜಾನಪದ ಕಾರ್ಯಕ್ರಮ ಆಯೋಜಿಸಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಮಹತ್ತರವಾಗಿದೆ ಎಂದರು.
ನಂತರ ಪ್ರಸಿದ್ಧ ಜಾನಪದ ಕಲಾವಿದರಾದ ಟ್ರೆಂಡಿಂಗ್ ಸ್ಟಾರ್ ಮ್ಯೂಸಿಕ್ ಮೈಲಾರಿ, ಎಚ್.ಬಿ. ಪರೀಟ, ಪರಸು ಕೊಲೂರ, ಲಕ್ಷ್ಮೇಶ್ವರ ಬಿಜಾಪುರ, ಹನುಮಂತ ಬಟ್ಟೂರ ಸೇರಿ ವಿವಿಧ ಕಲಾವಿದರಿಂದ ಜಾನಪದ ಹಾಡುಗಳ ಕಾರ್ಯಕ್ರಮ ನಡೆಯಿತು.
ಕಾಶಪ್ಪ ಸ್ವಾಮಿ, ಆನಂದ ಗಡ್ಡದೇವರಮಠ, ಪ.ಪಂ ಮಾಜಿ ಸದಸ್ಯ ಮಂಜುನಾಥ ಗಂಟಿ, ವಿರೂಪಾಕ್ಷಪ್ಪ ಪಡಿಗೇರ, ಹೊನ್ನೇಶ ಪೋಟಿ, ದೇವಪ್ಪ ಲಮಾಣಿ, ನಾಗರಾಜ ಲಕ್ಕುಂಡಿ, ಎಂ.ಕೆ. ಲಮಾಣಿ, ಹೊನ್ನಪ್ಪ ಶಿರಹಟ್ಟಿ, ದೇವಪ್ಪ ಬಟ್ಟೂರ, ಮಹೇಶ ಹಾರೋಗೇರಿ, ಆನಂದ ಮಾಳೆಕೋಪ್ಪ, ಭಾಗ್ಯಶ್ರೀ ಬಾಬಣ್ಣ, ಮಂಜುನಾಥ ಹಮ್ಮಿಗಿ, ಕರಿಯಪ್ಪ ಕುಳಗೇರಿ, ಆನಂದ ಕೋಳಿ, ಹೇಮಂತ ಕೆಂಗೊಂಡ, ಮಹೇಶ ಹಾರೋಗೇರಿ ಮುಂತಾದವರು ಉಪಸ್ಥಿತರಿದ್ದರು.


