ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಕಳೆದ 17 ವರ್ಷಗಳ ಹಿಂದೆ ಸ್ಥಾಪನೆಯಾದ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಂಗ ಸಂಸ್ಥೆಯಾದ ಚೈತನ್ಯ ಕ್ರೀಡಾ ಸಂಸ್ಥೆಯ ಕಾರ್ಯ ಶ್ಲಾಘನೀಯ. ಈ ಸಂಸ್ಥೆಯ ಅಡಿಯಲ್ಲಿ ಅಟ್ಯಾಪಟ್ಯಾ ತರಬೇತಿ ಪಡೆಯುತ್ತಿರುವ ನೀವು ಸುದೈವಿಗಳು. ಯಾವುದೇ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಯಶಸ್ಸು ಸಿಗುತ್ತದೆ. ಇಂದಿನಿಂದ ಈ ಆಟ್ಯಾಪಟ್ಯಾ ತರಬೇತಿ ಪಡೆಯಲು ಬಂದಿರುವ ನೀವು ಇದನ್ನು ಶ್ರದ್ಧೆಯಿಂದ ಕಲಿತು ಉತ್ತಮ ಆಟಗಾರರಾಗಿ ಹೊಮ್ಮಿರಿ. ನಿಮ್ಮ ತರಬೇತಿ ಯಶಸ್ವಿಯಾಗಲಿ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ. ಕುಲಕರ್ಣಿ ಹೇಳಿದರು.
ಅವರು ಪಟ್ಟಣದ ಬಸ್ ನಿಲ್ದಾಣದ ಎದುರಿಗಿನ ಶಾಲಾ ಬಯಲಿನಲ್ಲಿ 20 ದಿನಗಳ ಕಾಲ ಚೈತನ್ಯ ಕ್ರೀಡಾ ಸಂಸ್ಥೆಯಿಂದ ಹಮ್ಮಿಕೊಂಡಿರುವ ಅಟ್ಯಾಪಟ್ಯಾ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನರೇಗಲ್ಲದಲ್ಲಿ 17ವರ್ಷಗಳ ಹಿಂದೆ ಸ್ಥಾಪನೆಯಾದ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ತನ್ನ ಅನೇಕ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಈ ನಾಡಿನ ಸಾಹಿತ್ಯಾಸಕ್ತರ ಮತ್ತು ಕ್ರೀಡಾಪ್ರೇಮಿಗಳ ಮನವನ್ನು ಗೆದ್ದಿದೆ. ಅದರ ಅಂಗ ಸಂಸ್ಥೆಯಾದ ಚೈತನ್ಯ ಕ್ರೀಡಾ ಸಂಸ್ಥೆಯಿಂದಲೂ ಅನೇಕ ಮಕ್ಕಳು ರಾಜ್ಯ, ರಾಷ್ಟç ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿ ಸಂಸ್ಥೆಗೆ ಮತ್ತು ನರೇಗಲ್ಲ ಪಟ್ಟಣಕ್ಕೆ ಹೆಸರು ತಂದಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣರು ಸಂಸ್ಥೆಯ ಅಧ್ಯಕ್ಷರಾದ ನಿಂಗರಾಜ ಬೇವಿನಕಟ್ಟಿ, ಮುಖ್ಯ ತರಬೇತುದಾರರಾದ ರಫೀಕ್ ರೇವಡಿಗಾರ, ಹಿರಿಯ ದೈಹಿಕ ಶಿಕ್ಷಕ ಆರ್.ಎಸ್. ನರೇಗಲ್ಲ ಮತ್ತು ಶಿಕ್ಷಕ ಕುಂಬಾರವರು. ಈ ನಾಲ್ಕೂ ರತ್ನಗಳು ಅಟ್ಯಾಪಟ್ಯಾ ಆಟದಲ್ಲಿ ನಮ್ಮ ನರೇಗಲ್ಲದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಎನ್.ಕೆ. ಬೇವಿನಕಟ್ಟಿ ಕಾರ್ಯಕ್ರಮವನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಮುಖ್ಯ ತರಬೇತುದಾರ ಮಹಮ್ಮದ ರಫೀಕ್ ರೇವಡಿಗಾರ, ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕ ವಿ.ಎ. ಕುಂಬಾರ, ಆರ್.ಎಸ್. ನರೇಗಲ್ಲ, ಎಂಸಿಎಸ್ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ತಿಮ್ಮರಡ್ಡಿ ಬಂಡಿವಡ್ಡರ, ಚಂದ್ರಶೇಖರ ಹಂಚಿನಾಳ, ಪೊಲೀಸ್ ಇಲಾಖಾ ಸಿಬ್ಬಂದಿ ವಿಜಯ ಗೋದಿಗನೂರ, ಆನಂದ ಕೊಂಡಿ, ಮಂಜುನಾಥ ಬ್ಯಾಳಿ ಸೇರಿದಂತೆ ಇನ್ನಿತರರು ಇದ್ದರು.
ರಾಷ್ಟ್ರೀಯ ಕಬಡ್ಡಿ ಆಟಗಾರ ಸಂತೋಷ ಹನುಮಸಾಗರ, ಅಂತಾರಾಷ್ಟ್ರೀಯ ಅಟ್ಯಾಪಟ್ಯಾ ಕ್ರೀಡಾಪಟು ಭೀಮಮ್ಮ ಪೂಜಾರ ಕಾರ್ಯಕ್ರಮ ಉದ್ಘಾಟಿಸಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.