ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಿದ್ಯೆಗೆ ವಿನಯವೇ ಭೂಷಣ ಎಂಬಂತೆ ಪ್ರಸ್ತುತ ತಂತ್ರಜ್ಞಾನದ ದಿನಗಳಲ್ಲಿ ಮಕ್ಕಳಿಗೆ ಬಾಲ್ಯದಲ್ಲಿಯೇ ಪಠ್ಯ ಶಿಕ್ಷಣದೊಂದಿಗೆ ತಂದೆ-ತಾಯಿ, ಗುರು-ಹಿರಿಯರ ಬಗ್ಗೆ ಗೌರವ ಭಾವನೆ, ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯಗಳ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ಬನ್ನಿಕೊಪ್ಪ/ಮೈಸೂರ ಜಪದಕಟ್ಟಿಮಠದ ಶ್ರೀ ಡಾ. ಸುಜ್ಞಾನದೇವ ಶಿವಾಚಾರ್ಯರು ಹೇಳಿದರು.
ಅವರು ಬುಧವಾರ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರ ಲೀಲಾಮೃತ ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಠ-ಮಾನ್ಯಗಳು ಈ ನೆಲದಲ್ಲಿ ತ್ರಿವಿಧ ದಾಸೋಹದ ಜೊತೆಗೆ ಧರ್ಮ, ಸಂಸ್ಕಾರ, ಮೌಲ್ಯಗಳನ್ನು ಬಿತ್ತುವ ಸತ್ಕಾರ್ಯ ಮಾಡಿವೆ. ಈ ನಿಟ್ಟಿನಲ್ಲಿ ಪಂಚಪೀಠಗಳ ಕಾರ್ಯ ಶ್ಲಾಘನೀಯ. ನಿತ್ಯದ ಬದುಕಿನ ಜಂಜಾಟಗಳ ನಡುವೆಯೂ ಶ್ರಾವಣ ಮಾಸದಲ್ಲಿ ಮನಸ್ಸಿನ ಶಾಂತಿ ಮತ್ತು ನೆಮ್ಮದಿಗಾಗಿ ಪುಣ್ಯಪುರುಷರ ಪುರಾಣ ಪುಣ್ಯಕಥೆಗಳು ಅವಶ್ಯಕ. ಈ ನಿಟ್ಟಿನಲ್ಲಿ ತಾಯಿ ಪಾರ್ವತಿ ಮಕ್ಕಳ ಬಳಗದವರು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಪುರಾಣ, ಧರ್ಮಾಚರಣೆ, ಸಂಸ್ಕೃತಿ, ಸಂಪ್ರದಾಯ, ಧಾನ, ಧರ್ಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಶ್ರಾವಣ ಮಾಸದುದ್ದಕ್ಕೂ ನಡೆಯುವ ಪುರಾಣ ಪ್ರವಚನವನ್ನು ಶಿಕ್ಷಕ ಪ್ರಭುಗೌಡ ಯಕ್ಕಿಕೊಪ್ಪ ನಡೆಸಿಕೊಡಲಿದ್ದು, ಪ್ರತಿನಿತ್ಯ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನಡೆಯಲಿದೆ.
ಸುವರ್ಣಬಾಯಿ ಬಹಾದ್ದೂರದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷೀ ಮಹಾಂತಶೆಟ್ಟರ, ಶಾರದಕ್ಕ ಮಹಾಂತಶೆಟ್ಟರ, ಲಲಿತಕ್ಕ ಕೆರಿಮನಿ, ಪ್ರಭುಗೌಡ ಯಕ್ಕಿಕೊಪ್ಪ, ರೂಪಾ ನವಲೆ, ಜೆ.ಡಿ. ಲಮಾಣಿ, ಮೃತ್ಯುಂಜಯ ಹಿರೇಮಠ, ವಿಜಯಕುಮಾರ ಬಿಳಿಯಲಿ, ಶರಣಪ್ಪ ಅಣ್ಣಿಗೇರಿ, ಸೋಮಯ್ಯ ವೀರಕ್ತಮಠ, ಹನುಮಂತಪ್ಪ ಭಜಂತ್ರಿ, ಸ್ವಾತಿ ಪೈ, ವೀಣಾ ಜಾಮನೂರ, ಕಾವ್ಯ ದೇಸಾಯಿ ಇದ್ದರು. ಜ್ಯೋತಿ ಅರಳಿಕಟ್ಟಿ, ಜಗದೀಶ ಶಿರಹಟ್ಟಿ ನಿರೂಪಿಸಿದರು.