ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯಿಂದ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಪುರಸಭೆ ಸದಸ್ಯ ರಾಜೇಶ ಕುಂಬಿ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಇಂಗ್ಲಿಷ್ ಭಾಷೆಗೆ ಮರುಳಾಗಿರುವ ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕಬಾರದು. ಕನ್ನಡ ಶಾಲೆಗಳಲ್ಲಿಯೇ ಕಲಿತವರು ಮುಂದೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವುದನ್ನು ಕಾಣುತ್ತಿದ್ದೇವೆ. ಪಾಲಕರು ಕನ್ನಡ ಶಾಲೆ ಎಂದು ಮೂಗು ಮುರಿಯದೇ ಅಲ್ಲಿಗೆ ಮಕ್ಕಳನ್ನು ಕಳುಹಿಸಬೇಕು ಎಂದರು.
ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಟೆಕ್ಸಾಸ್ ಕಂಪನಿಯವರು ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿ ಕೊಡುತ್ತಿರುವುದ ಖುಷಿ ತಂದಿದೆ. ಎಲ್ಲ ಕಂಪನಿಗಳು ಮತ್ತು ಸಂಘ-ಸAಸ್ಥೆಗಳು ಕನ್ನಡ ಶಾಲೆಗಳನ್ನು ಉಳಿಸಲು ಪ್ರಯತ್ನಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಬಿ.ಎಂ. ಕುಂಬಾರ ಮಾತನಾಡಿ, ಟೆಕ್ಸಾಸ್ ಕಂಪನಿಯವರು ಪ್ರತಿ ವರ್ಷ ನೂರಾರು ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಕೆಲಸ ಎಂದರು ಹೇಳಿದರು.
ಸಿಆರ್‌ಪಿಗಳಾದ ಉಮೇಶ ನೇಕಾರ, ಸತೀಶ ಬೋಮಲೆ, ಶಿಕ್ಷಕಿ ಎಚ್.ಡಿ. ನಿಂಗರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಟೆಕ್ಸಾಸ್ ಕಂಪನಿ ಸಿಬ್ಬಂದಿ, ಭಾವನಾ, ಮಹೇಶ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶಪ್ಪ ಬಸಾಪುರ, ಉಪಾಧ್ಯಕ್ಷೆ ನಿಖಿತಾ ಶೇರಖಾನೆ, ಶಿಕ್ಷಕ ಸಿಬ್ಬಂದಿ ಇದ್ದರು.