
ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ತಾವು ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿ ಬಂದ ತಕ್ಷಣ ಯಲವಿಗಿ-ಕುಷ್ಟಗಿ ರೈಲು ಸಂಪರ್ಕಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿ ವರ್ಷವೇ ಕಳೆಯಿತು. ಅವರು ಸಂಸದರಾಗಿ ಆಯ್ಕೆಯೂ ಆದರು. ಆದರೆ ಈವರೆಗೂ ನರೇಗಲ್ಲ ಹೋಬಳಿಯ ಮತದಾರರಿಗೆ ಅವರ ದರ್ಶನವೇ ಆಗಿಲ್ಲವೆನ್ನುವುದು ಮತದಾರರ ಅಳಲಾಗಿದೆ. ತಾವು ಹೇಳಿದಂತೆ ಆರಿಸಿ ಬಂದ ತಕ್ಷಣ ಯಲವಿಗಿ-ಕುಷ್ಟಗಿ ರೈಲು ಮಾರ್ಗ ಜೋಡಣೆಗೆ ಅವರು ನಡೆಸಿರುವ ಪ್ರಯತ್ನವಾದರೂ ಏನು ಎಂಬುದು ಮತದಾರರ ಪ್ರಶ್ನೆ.
ಈ ಕುರಿತು ಮಾತನಾಡಿದ ರೈಲು ಹೋರಾಟ ಸಮಿತಿ ಸದಸ್ಯ ಡಾ. ಆರ್.ಕೆ. ಗಚ್ಚಿನಮಠ, ಆಗಿನ ರೇಲ್ವೆ ಮಂತ್ರಿ ಲಾಲಬಹದ್ದೂರ ಶಾಸ್ತ್ರಿಯವರು ಗದಗ-ವಾಡಿ ರೈಲು ಮಾರ್ಗಕ್ಕೆ ಅನುಮತಿಸಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಈ ಮಾರ್ಗವು ಗದಗ-ಕಣಗಿನಹಾಳ-ಕೋಟುಮಚಗಿ-ನರೇಗಲ್ಲ-ಗಜೇಂದ್ರಗಡ-ಹನುಮಸಾಗರ ಮಾರ್ಗವಾಗಿ ಸಾಗುತ್ತದೆಂದು ನಾವೆಲ್ಲರೂ ಕನಸು ಕಂಡಿದ್ದೆವು. ಆದರೆ ಈ ಯೋಜನೆ ಜಾರಿಗೆ ಬಾರದಿರುವುದು ನಮಗೆಲ್ಲರಿಗೂ ತುಂಬಾ ನಿರಾಸೆಯಾಗಿದೆ ಎಂದಿದ್ದಾರೆ.
ರೈಲು ಹೋರಾಟ ಸಮಿತಿ ಸದಸ್ಯ ಅಶೋಕ ಬೇವಿನಕಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿ, ಆಗಿನ ಸಂಸದರಾಗಿದ್ದ ಶಿವಕುಮಾರ ಉದಾಸಿಯವರು ಈ ಕುರಿತು ಈ ಭಾಗದ ಜನರ ಮೂಗಿಗೆ ತುಪ್ಪ ಹಚ್ಚಿ ತಮ್ಮ ಅವಧಿಯನ್ನು ಮುಗಿಸಿದರೇ ಹೊರತು, ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಈಗಿನ ಸಂಸದರಾದರೂ ನಮಗೆ ನ್ಯಾಯ ಒದಗಿಸಿಕೊಡುತ್ತಾರೆಂದು ಕಾಯುತ್ತಿದ್ದೇವೆ. ಚುನಾವಣೆ ಮುಗಿದ ನಂತರ ಅವರ ಭೇಟಿ ಈವರೆಗೂ ನಮಗಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.