ಗದಗ:- ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಯುವಕರ ಗುಂಪು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ತುಂಗಭದ್ರಾ ನದಿಯಲ್ಲಿ ಜರುಗಿದೆ.
ಉಕ್ಕಿ ಹರಿಯುತ್ತಿರೋ ತುಂಗಭದ್ರಾ ನದಿಯಲ್ಲಿ ಜೀವದ ಹಂಗು ತೊರೆದು ಕೊರ್ಲಹಳ್ಳಿ ಗ್ರಾಮದ ಯುವಕರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಗದಗ ಹಾಗೂ ಬಳ್ಳಾರಿ ಜಿಲ್ಲೆಗಳ ಮಧ್ಯ ಸಂಪರ್ಕಿಸುವ ಸೇತುವೆ ಇದಾಗಿದ್ದು, ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರೋ ಈ ಸೇತುವೆ ಮೇಲಿಂದ ವ್ಯಕ್ತಿಯೋರ್ವ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ.
ಹೂವಿನ ಹಡಗಲಿ ತಾ. ಮೀರಾಕೊರಳಹಳ್ಳಿ ಗ್ರಾಮದ ನಿವಾಸಿ 30 ವರ್ಷದ ಕರಿಬಸಪ್ಪ (30) ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ವ್ಯಕ್ತಿ ಎನ್ನಲಾಗಿದೆ. ತಕ್ಷಣ ನದಿಗೆ ಹಾರಿದ್ದನ್ನ ಗಮನಿಸಿದ ಗದಗ ಜಿಲ್ಲೆಯ ಕೊರ್ಲಹಳ್ಳಿ ಗ್ರಾಮದ ಪುನೀತ್, ಕೃಷ್ಣ, ಹನುಮಂತ ಸೇರಿದಂತೆ ಹಲವು ಯುವಕರಿಂದ ವ್ಯಕ್ತಿ ರಕ್ಷಣೆ ಮಾಡಲಾಗಿದೆ. ನಿನ್ನೆ ಸಂಜೆ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.