ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕೇವಲ ಮನರಂಜನೆಗಷ್ಟೇ ಅಲ್ಲದೇ ಬದುಕಿನ ಮೌಲ್ಯವನ್ನು ತಿಳಿಸಿಕೊಡುವುದು ನಾಟಕ ಕಲೆ. ಸಮಾಜದ ಪ್ರತಿಬಿಂಬವಾದ ನಾಟಕ ಕಲೆ ಸಮಾಜವನ್ನು ತಿದ್ದುವ ಮತ್ತು ಬದುಕಿನ ನೀತಿಪಾಠ ಕಲಿಸುವ ಶಾಲೆ `ರಂಗಭೂಮಿ’ಯಾಗಿದೆ ಎಂದು ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಹೇಳಿದರು.
ಅವರು ಲಕ್ಷ್ಮೇಶ್ವರದಲ್ಲಿ ನಾಟಕ ಪ್ರದರ್ಶನ ನಡೆಸುತ್ತಿರುವ ರಾಣೆಬೆನ್ನೂರಿನ ಶ್ರೀ ಮಂಜುನಾಥ ನಾಟ್ಯ ಸಂಘದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿಶ್ವ ರಂಗಭೂಮಿ ದಿನಾಚರಣೆ ಆಚರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್ ಹಾವಳಿಯಿಂದಾಗಿ ರಂಗಭೂಮಿ ಹಿನ್ನಡೆ ಅನುಭವಿಸುತ್ತಿದೆ. ಈಗ ರಂಗಭೂಮಿ ಕಲಾವಿದರ ಬದುಕು ಕೂಡ ಸಂಕಷ್ಟದಲ್ಲಿದೆ. ಕಲಾವಿದರೇ ಈ ದೇಶದ ನಿಜವಾದ ದೊಡ್ಡ ಆಸ್ತಿ. ಕಲೆಗೆ, ಕಲಾವಿದರಿಗೆ ಪ್ರೋತ್ಸಾಹ, ಸಹಕಾರ ನೀಡಿದ್ದೇ ಆದಲ್ಲಿ ಕಲಾವಿದ ಮತ್ತು ಕಲೆ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಕಲೆ ಮತ್ತು ಕಲಾವಿದರನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಸರ್ಕಾರ, ಸಂಘ-ಸಂಸ್ಥೆಗಳು, ರಂಗಾಸಕ್ತರು ಹಾಗೂ ಸಾರ್ವಜನಿಕರದ್ದಾಗಿದೆ ಎಂದರು.
ಸಾಹಿತಿ ಬಸವರಾಜ ಬಾಳೇಶ್ವರಮಠ, ಸಿ.ಜಿ. ಹಿರೇಮಠ ಮಾತನಾಡಿ, ಲಕ್ಷ್ಮೇಶ್ವರ ಕನ್ನಡ ಸಾಹಿತ್ಯ, ಸಂಗೀತ, ನಾಟಕ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದೆ. ಲಕ್ಷೇಶ್ವರದ ಬಚ್ಚಾಸಾನಿ ಸಹೋದರಿಯರು ಪರಿವಾರ ಸಮೇತ ಹುಟ್ಟುಹಾಕಿದ `ಸ್ತ್ರೀ ಸಂಗೀತ ನಾಟಕ ಮಂಡಳಿ’ ರಾಜ್ಯದ ಪ್ರಥಮ ನಾಟಕ ಕಂಪನಿಯಾಗಿದೆ. ಬದುಕಿನ ಹಂತ, ಮೌಲ್ಯಗಳನ್ನು ಅಭಿನಯದ ಮೂಲಕ ಜೀವಂತಿಕೆಯ ರೂಪ ನೀಡುವ ಕಲೆ ಮತ್ತು ಕಲಾವಿದರನ್ನು ಉಳಿಸಿ-ಬೆಳೆಸುವುದು ಎಲ್ಲ ಜವಾಬ್ದಾರಿಯಾಗಿದೆ ಎಂದರು.
ನಾಟ್ಯ ಸಂಘದ ಹಿರಿಯ ಕಲಾವಿದ, ಮಾಲಕ ಮಲ್ಲಿಕಾರ್ಜುನ ಚಿಕ್ಕಮಠ ಸೇರಿ ಕಲಾವಿರರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ಸಾಹಿತಿ ರಮೇಶ ನವಲೆ, ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಮಂಜುನಾಥ ಚಾಕಲಬ್ಬಿ, ನಾಗರಾಜ ಶಿಗ್ಲಿ, ಈರಣ್ಣ ಗಾಣಗೇರ, ನಾಗರಾಜ ಮಜ್ಜಿಗುಡ್ಡ, ಅರವಿಂದ ದೇಶಪಾಂಡೆ, ವಿಜಯ. ಮೆಕ್ಕಿ, ಕಾನಿಪ ಸಂಘದ ತಾಲೂಕಾಧ್ಯಕ್ಷ ಮಲ್ಲು ಕಳಸಾಪುರ, ನಾಗರಾಜ ಹಣಗಿ, ಸಾಹಿತಿ ಸುರೇಶ ಹಲ್ಲಲ್ಲಿ, ದಿಂಗಂಬರ ಪೂಜಾರ ಸೇರಿ ಹಲವರಿದ್ದರು.