ಮುಂಬೈ: ಬಿಜೆಪಿ ಸಂಸದ ಹಾಗೂ ಪ್ರಸಿದ್ಧ ಗಾಯಕ ಮನೋಜ್ ತಿವಾರಿ ಅವರ ಮುಂಬೈ ನಿವಾಸದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಅಂಧೇರಿ ಪಶ್ಚಿಮದ ಶಾಸ್ತ್ರಿ ನಗರದಲ್ಲಿರುವ ಸುಂದರ್ಬನ್ ಅಪಾರ್ಟ್ಮೆಂಟ್ನ ಮನೆಯಿಂದ ಒಟ್ಟು 5.40 ಲಕ್ಷ ರೂ. ನಗದು ಕಳುವಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಮನೋಜ್ ತಿವಾರಿ ಅವರ ಮಾಜಿ ಕೆಲಸಗಾರ ಸುರೇಂದ್ರ ಕುಮಾರ್ ದೀನನಾಥ್ ಶರ್ಮಾ ಅವರನ್ನು ಅಂಬೋಲಿ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಯನ್ನು ಗುರುತಿಸಲಾಗಿದ್ದು, ನಕಲಿ ಕೀಲಿಗಳನ್ನು ಬಳಸಿ ಮನೆ, ಮಲಗುವ ಕೋಣೆ ಹಾಗೂ ಕ್ಲೋಸೆಟ್ ತೆರಳಿ ಕಳ್ಳತನ ನಡೆಸಿದ್ದಾನೆ ಎನ್ನಲಾಗಿದೆ.
ಮನೋಜ್ ತಿವಾರಿ ಅವರ ಮ್ಯಾನೇಜರ್ ಪ್ರಮೋದ್ ಪಾಂಡೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



