ಚಿಕ್ಕಬಳ್ಳಾಪುರ:- ಮೊದಲ ಮದುವೆ ಆಗಿದ್ದರೂ ಮತ್ತೊಬ್ಬಳ ಜೊತೆ ಅಕ್ರಮವಾಗಿ ಸಂಸಾರ ಮಾಡಲು ಕಳ್ಳತನದ ಹಾದಿ ಹಿಡಿದ ಲವರ್ಸ್ ಗಳು ಇದೀಗ ಪೊಲೀಸರ ಅತಿಥಿ ಆಗಿದ್ದಾರೆ.
ಚಿಕ್ಕಬಳ್ಳಾಪುರ ಗೌರಿಬಿದನೂರಿನ ಮುದುಗೆರೆಯ ನಿವಾಸಿಯಾದ ಗೋವಿಂದರಾಜು ಎಂಬಾತನಿಗೆ ಮೊದಲೇ ಮದುವೆ ಆಗಿತ್ತು. ಆದ್ರೆ ಈತನಿಗೆ ಮತ್ತೊಬ್ಬಳ ಜೊತೆ ಲವ್ ಆಗಿತ್ತು. ವಿವಾಹಿತ ಗೋವಿಂದರಾಜು ಅಜ್ಜಿಯ ಆಸರೆಯಲ್ಲಿದ್ದ ಯುವತಿಯನ್ನು ಪ್ರೀತಿ ಮಾಡಿ ಆಕೆಯನ್ನು ಗರ್ಭಿಣಿ ಮಾಡಿದ್ದ. ಈ ವಿಷಯ ಊರಿಗೆಲ್ಲ ಗೊತ್ತಾಗುತ್ತಿದ್ದಂತೆಯೇ, ಇಬ್ಬರೂ ಊರು ಬಿಟ್ಟು ತೆರಳಿದ್ದರು. ಗಾರೆ ಕೆಲಸ ಮಾಡುವ ಗೋವಿಂದರಾಜುಗೆ ಬಾಡಿಗೆ ಮನೆ ಮಾಡಲು ಹಣವಿರಲಿಲ್ಲ. ಇದಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದಾನೆ.
ಮೊದಲು ಗೋವಿಂದರಾಜು ಬೈಕ್‌ವೊಂದನ್ನ ಕದ್ದಿದ್ದ. ಅದೇ ಬೈಕ್‌ನಲ್ಲೇ ಇಬ್ಬರೂ, ಕಳವಾರ ಗ್ರಾಮದ ಬಳಿ ನಿರ್ಮಾಣ ಹಂತದ ಒಂಟಿ ತೋಟದ ಮನೆಗೆ ತೆರಳಿದ್ದರು. ಅಲ್ಲಿದ್ದ ಅಜ್ಜಿ ಅಂಜನಮ್ಮ ಎಂಬವರ ಬಾಯಿಗೆ ಬಟ್ಟೆ ತುರುಕಿ ಹಲ್ಲೆ ಮಾಡಿದ್ದರು. ಬಳಿಕ 50 ಗ್ರಾಂ ಚಿನ್ನದ ಮಾಂಗಲ್ಯ ಸರ ದೋಚಿದ್ದರು.
ಗೋವಿಂದರಾಜುವಿನಿಂದಾಗಿ ಯುವತಿ ಈಗ 8 ತಿಂಗಳ ಗರ್ಭಿಣಿ. ಊರಿನಿಂದ ಓಡಿಬಂದಿದ್ದ ಆತನಿಗೆ ಈಗ ಆಕೆ ಜತೆ ಬಾಡಿಗೆ ಮನೆ ಮಾಡಬೇಕಾದ ಅನಿವಾರ್ಯತೆ ಇತ್ತು. ಅದಕ್ಕೆ ಹಣಬೇಕಾಗಿತ್ತು. ಅದಕ್ಕೆ ಮೊದಲು ಸಂಚು ಹೂಡಿ ಬೈಕ್ ಕಳವು ಮಾಡಿದ್ದರು. ನಂತರ ಬೈಕ್ ನಂಬರ್ ಪ್ಲೇಟ್ ಕಿತ್ತು ಹಾಕಿದ್ದರು. ಬೈಕಿನಲ್ಲಿ ಊರೂರು ಅಲೆಯುವಾಗಲೇ, ಅಂಜನಮ್ಮ ಇವರ ಕಣ್ಣಿಗೆ ಬಿದ್ದಿದ್ದರು. ಆದರೆ, ಇವರ ನಸೀಬು ಕೆಟ್ಟಿತ್ತು. ಇವರ ಓಡಾಟ, ಕಳ್ಳಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರಿಂದಾಗಿ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.