ಬೆಂಗಳೂರು:“ಜಾತಿ ಗಣತಿ ವಿಚಾರವಾಗಿ ಎದ್ದಿರುವ ಅನುಮಾನಗಳನ್ನು ಬಗೆಹರಿಸುವ ದೊಡ್ಡ ಜವಾಬ್ದಾರಿ ಸರ್ಕಾರದ ಮುಂದಿದೆ. ಈ ಅನುಮಾನಗಳಿಗೆ ತೆರೆ ಎಳೆಯುವ ಶಕ್ತಿ ಸರ್ಕಾರಕ್ಕಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಅವರ ಸಚಿವ ಸಂಪುಟ ಸುದೀರ್ಘವಾಗಿ ಚರ್ಚಿಸಿ ಈ ಕೆಲಸ ಮಾಡಲಿದ್ದಾರೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಸುರೇಶ್ ಅವರು ಮಂಗಳವಾರ ಮಾತನಾಡಿದರು.
ನಗರ ಪ್ರದೇಶದಲ್ಲಿ ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದು ಆಯೋಗ ಹೇಳಿದ್ದು, ಕಳೆದ 15 ವರ್ಷಗಳಲ್ಲಿ ಸಾಕಷ್ಟು ಜನ ನಗರ ಪ್ರದೇಶಗಳಿಗೆ ವಲಸೆ ಬಂದಿದ್ದಾರೆ. ಇವರನ್ನು ವರದಿಯಲ್ಲಿ ಸೇರಿಸಲಾಗಿದೆಯೇ ಇಲ್ಲವೇ ಎಂಬ ಗೊಂದಲವಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆಗಿದ್ದು, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದು,
ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ನಂಬಿಕೆ ಇದೆ. ಎಲ್ಲರಿಗೂ ಸರಿಯಾದ ರೀತಿ ನ್ಯಾಯ ಒದಗಿಸುವುದು ಅವರ ಜವಾಬ್ದಾರಿಯೂ ಆಗಿದೆ. ಈ ಪ್ರಕ್ರಿಯೆಯಲ್ಲಿ ಅನುಮಾನಗಳನ್ನು ನಿವಾರಿಸುವುದು ಮೊದಲ ಕೆಲಸವಾಗಬೇಕು” ಎಂದು ಅಭಿಪ್ರಾಯಪಟ್ಟರು.
ಈ ಸಮೀಕ್ಷೆಯಲ್ಲಿ ಒಳಪಟ್ಟಿರುವ ಕುಟುಂಬಗಳ ಸಂಖ್ಯೆ 1.34 ಕೋಟಿ ಇದೆ. ನಮ್ಮಲ್ಲಿ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡುಗಳೇ 1.50 ಕೋಟಿಗಳಿವೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಕಾರ್ಯಕ್ರಮ ಈ ಕುಟುಂಬಗಳಿಗೆ ತಲುಪುತ್ತಿವೆ. 10,78,106 ಅಂತ್ಯೋದಯ ಕಾರ್ಡ್, 1,17,49,098 ಬಿಪಿಎಲ್ ಕಾರ್ಡ್, 25,48,458 ಎಪಿಲ್ ಕಾರ್ಡ್‌ಗಳು ಸೇರಿ ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿವೆ.
ನಮ್ಮ ಸರ್ಕಾರದ ಪ್ರಮುಖ ಗ್ಯಾರಂಟಿ ಗೃಹಜ್ಯೋತಿಯಲ್ಲಿ ಸುಮಾರು 1.60 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. 1.22 ಕೋಟಿ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಸರ್ಕಾರಿ ನೌಕರರು, ತೆರಿಗೆ ಪಾವತಿದಾರರು ಸೇರಿದಂತೆ ಅನೇಕರು ಪಡೆಯುತ್ತಿದ್ದಾರೆ. ಈ ಯೋಜನೆಗಳಿಂದ ವಂಚನೆಯಾಗಿರುವವರೂ ಅನೇಕರಿದ್ದಾರೆ. ಇಂತಹ ಅಂಕಿಅಂಶಗಳು ನಮ್ಮ ಬಳಿ ಇರುವಾಗ ಸಾರ್ವಜನಿಕರಲ್ಲಿ ಅನುಮಾನ ಬರುವುದು ಸಹಜ. ಹೀಗಾಗಿ ಜಾತಿಗಣತಿ ವರದಿಯಲ್ಲಿ ಸಮೀಕ್ಷೆ ಮಾಡಿಲ್ಲ ಎಂದು ಹೇಳಲಾಗುವುದಿಲ್ಲ.
ಸಮೀಕ್ಷೆಯಲ್ಲಿ ಕೆಲವರನ್ನು ಬಿಟ್ಟಿರುವುದರಿಂದ ಅವರನ್ನು ಸೇರಿಸಿಕೊಳ್ಳಬೇಕು. ಕೆಲವರು ಉಪಜಾತಿಗಳನ್ನು ನೋಂದಣಿ ಮಾಡಿದ್ದು, ನಮ್ಮ ಸಂಖ್ಯೆ ಕಮ್ಮಿಯಾಗಿದೆ, ಅವರ ಸಂಖ್ಯೆ ಜಾಸ್ತಿಯಾಗಿದೆ ಎಂಬ ವಾದಗಳು ಸೃಷ್ಟಿಯಾಗಿವೆ. ಇದೆಲ್ಲದಕ್ಕೂ ಕೊನೆಯಾಡುವ ಶಕ್ತಿ ಮಾನ್ಯ ಮುಖ್ಯಮಂತ್ರಿಗಳಿಗಿದೆ. ಮುಖ್ಯಮಂತ್ರಿಗಳು ಹಾಗೂ ಅವರ ಸಚಿವ ಸಂಪುಟ ಈ ವಿಚಾರವಾಗಿ ಸುದೀರ್ಘವಾಗಿ ಚರ್ಚೆ ಮಾಡಿ 7 ಕೋಟಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು” ಎಂದು ಹೇಳಿದರು.