ಭಾರತೀಯ ಪಾಕಪದ್ಧತಿಯಲ್ಲಿ ಬೆಲ್ಲ ಒಂದು ಪ್ರಮುಖ ಅಂಶವಾಗಿದೆ. ಯಾವುದೇ ಸಿಹಿ ಪದಾರ್ಥ ಮಾಡಿದರೂ ಅದಕ್ಕೆ ಸಕ್ಕರೆ ಬದಲು ಬೆಲ್ಲ ಹಾಕಿದರೆ ಅದರ ರುಚಿಯೇ ಬೇರೆ ಇರುತ್ತೆ. ಈ ಹಿಂದೆ ಬೆಲ್ಲವನ್ನೇ ಬಳಸಲಾಗುತ್ತಿತ್ತು. ಆದ್ರೆ ಸಕ್ಕರೆ ಬಂದ ಮೇಲೆ ಬೆಲ್ಲದ ಬಳಕೆ ಕಡಿಮೆಯಾಗಿದೆ. ಕೆಲ ಹಳ್ಳಿಗಳಲ್ಲಿ ಈಗಲೂ ಕೂಡ ಕೇವಲ ಬೆಲ್ಲವನ್ನೇ ಬಳಸುವುದನ್ನು ನಾವು ನೋಡಬಹುದು. ಒಂದೇ ಒಂದು ತುಂಡು ಬೆಲ್ಲ ಪ್ರತಿ ದಿನಾ ಸವಿಯುವುದರಿಂದ ಅನೇಕ ರೀತಿಯ ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು.
ಲಿವರ್ ಸ್ವಚ್ಛವಾಗುತ್ತದೆ
ನಾವು ದಿನವೂ ಏನೇನೋ ತಿನ್ನುತ್ತಿರುತ್ತೇವೆ. ಕಂಡಿದ್ದನ್ನೆಲ್ಲ ರುಚಿ(Taste) ನೋಲಿ ನಲಿಯುತ್ತೇವೆ. ಆದರೆ, ಎಲ್ಲವನ್ನೂ ದಕ್ಕಿಸಿಕೊಳ್ಳುವ ತಾಕತ್ತು ಲಿವರ್ ಗೆ ಇರಬೇಕಲ್ಲವೇ? ನಮ್ಮ ಲಿವರ್ ಅರ್ಥಾತ್ ಯಕೃತ್ ನಲ್ಲಿ ನಾವು ಸೇವಿಸುವ ಆಹಾರದಿಂದ ಅನೇಕ ವಿಷಕಾರಿ ಅಂಶಗಳು ಶೇಖರಣೆಯಾಗುತ್ತಿರುತ್ತವೆ. ಬೆಲ್ಲ ಸೇವನೆ ಮಾಡುವುದರಿಂದ ಈ ವಿಷಕಾರಿ ಅಂಶ ನಾಶವಾಗುತ್ತದೆ. ಬೆಲ್ಲವು ಡಿಟಾಕ್ಸ್ ನಂತೆ ಕೆಲಸ ಮಾಡುತ್ತದೆ.
ಪಚನಶಕ್ತಿ ಹೆಚ್ಚುತ್ತದೆ
ಬೆಲ್ಲದಿಂದ ಪಚನಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆಗೆ ನೆರವಾಗುವ ಬೆಲ್ಲದಿಂದ ಮಲಬದ್ಧತೆಯೂ ದೂರವಾಗುತ್ತದೆ. ಪಚನಗೊಳಿಸುವ ಪ್ರಕ್ರಿಯೆಗೆ ಪುರಕವಾಗಿರುವ ಕಿಣ್ವಗಳನ್ನು ಬೆಲ್ಲದಲ್ಲಿರುವ ಅಂಶ ಸಕ್ರಿಯಗೊಳಿಸುತ್ತದೆ. ಹೀಗಾಗಿ, ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಹೀಗಾಗಿಯೇ ಅನೇಕ ಕಡೆಗಳಲ್ಲಿ ಊಟವಾದ ಬಳಿಕ ಚೂರು ಬೆಲ್ಲ ಮೆಲ್ಲುವ ರೂಢಿಯನ್ನು ಕಾಣಬಹುದು.
ಇಮ್ಯೂನಿಟಿ ಹೆಚ್ಚಳ
ನೀವು ಎಂಥದ್ದೇ ಕಷಾಯ ಮಾಡಿ. ಅದಕ್ಕೆ ಬೆಲ್ಲ ಸೇರಿಸಿಕೊಳ್ಳದೆ ರುಚಿ ಬರುವುದಿಲ್ಲ. ಅಷ್ಟಕ್ಕೂ ಬೆಲ್ಲ ಸೇರಿಸುವುದು ರುಚಿಗೆ ಮಾತ್ರವೇ ಅಲ್ಲ. ಬೆಲ್ಲದಲ್ಲಿ ಸತು(Zinc) ಮತ್ತು ಸೆಲೆನಿಯಂ ಖನಿಜಾಂಶವಿರುತ್ತದೆ. ಇವು ಸೋಂಕುಗಳ (Infection) ವಿರುದ್ಧ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹೀಗಾಗಿ, ರೋಗ ನಿರೋಧಕ ಶಕ್ತಿ ಸದೃಢಗೊಳ್ಳುತ್ತದೆ.
ರಕ್ತ ಶುದ್ಧಿ ಮಾಡುವ ಬೆಲ್ಲ
ನಿತ್ಯವೂ ಬೆಲ್ಲ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ಹೇಳಿವೆ. ಆದರೆ, ಬೆಲ್ಲ ಕೂಡ ಶುದ್ಧವಾಗಿರಬೇಕು. ಯಾವುದೇ ಕೆಟ್ಟ ಅಂಶ ಬೆರೆತಿರದ ಉತ್ತಮ ಬೆಲ್ಲ ಆರೋಗ್ಯಕ್ಕೆ ಮಹತ್ವಪೂರ್ಣ ಕೊಡುಗೆ ನೀಡುತ್ತದೆ.
ಕಬ್ಬಿಣಾಂಶದಿಂದ ಹಿಮೋಗ್ಲೋಬಿನ್ ಏರಿಕೆ
ಮಹಿಳೆಯರಿಗೆ ಹಿಮೋಗ್ಲೋಬಿನ್ ಕೊರತೆಯುಂಟಾದರೆ ಬೆಲ್ಲವನ್ನು ದಿನವೂ ತಿನ್ನಿ ಎಂದು ಕೆಲವು ಆಯುರ್ವೇದ ವೈದ್ಯರು ಶಿಫಾರಸು ಮಾಡುತ್ತಾರೆ. ಇದರಿಂದ ಹಿಮೋಗ್ಲೋಬಿನ್ ಮಟ್ಟದಲ್ಲಿ ಏರಿಕೆಯಾಗುತ್ತದೆ. ಅತ್ಯುತ್ತಮ ಮಟ್ಟದಲ್ಲಿ ಕಬ್ಬಿಣಾಂಶ ಇರುವ ಬೆಲ್ಲದಿಂದ ಕೆಂಪು ರಕ್ತಕಣಗಳು ಹೆಚ್ಚುತ್ತವೆ. ಮುಟ್ಟು ನಿಲ್ಲುವ ವಯಸ್ಸಿನಲ್ಲಂತೂ ದಿನವೂ ಬೆಲ್ಲ ಸೇವನೆ ಮಾಡಬೇಕು. ಇದರಿಂದ ಮೆನೋಪಾಸ್ ಲಕ್ಷಣಗಳನ್ನು ಎದುರಿಸಲು ಅನುಕೂಲವಾಗುತ್ತದೆ. ಮೆನೋಪಾಸ್ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಮಾನಸಿಕ ಏರಿಳಿತ, ಉದ್ವೇಗ ನಿಯಂತ್ರಣಕ್ಕೂ ಇದು ಅನುಕೂಲ.