ವಿಜಯಸಾಕ್ಷಿ ಸುದ್ದಿ, ರೋಣ: ಮಹಿಳೆಯರ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಹೆಚ್‌ಪಿವಿ ಲಸಿಕೆ ರಾಮಬಾಣವಾಗಿದ್ದು, ವಿದ್ಯಾರ್ಥಿನಿಯರು ಲಸಿಕೆಯಿಂದಾಗುವ ಆರೋಗ್ಯದ ಲಾಭವನ್ನು ಪಡೆದುಕೊಳ್ಳಬೇಕು ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಬುಧವಾರ ಪಟ್ಟಣದ ಗುರುಭವನದಲ್ಲಿ ರಾಜ್ಯ ಖನಿಜ ಅಭಿವೃದ್ಧಿ ನಿಗಮ, ಜಿಲ್ಲಾ ಆರೋಗ್ಯ ಹಾಗೂ ಶಿಕ್ಷಣ ಇಲಾಖೆ, ಎಸ್.ಆರ್. ಪಾಟೀಲ ಪ್ರತಿಷ್ಠಾನ, ರಾಜೀವಗಾಂಧಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಪ್ರಾಜೆಕ್ಟ್ ಶೀಲ್ಡ್ರಾವರ ಆಶ್ರಯದಲ್ಲಿ ಜರುಗಿದ ಹೆಚ್.ಪಿ.ವಿ 2ನೇ ಹಂತದ ಉಚಿತ ಲಸಿಕೆ ವಿತರಣಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಚ್.ಪಿ.ವಿ ಲಸಿಕೆಯನ್ನು ಮೊದಲು ನಾನು ನಮ್ಮ ಮೊಮ್ಮಕ್ಕಳ ಮೆೇಲೆ ಪ್ರಯೋಗ ಮಾಡಿಸಿದ್ದೇನೆ. ಅವರ ಮೆೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಆಗದಿದ್ದಲ್ಲಿ ಮಾತ್ರ ಬೇರೆ ಹೆಣ್ಣು ಮಕ್ಕಳಿಗೆ ಉಚಿತವಾಗಿ ವಿತರಿಸುವಂತೆ ತಿಳಿಸಿದೆ. ಇಂತಹ ಮಹತ್ವದ ಕಾರ್ಯಕ್ಕೆ ಶಿಕ್ಷಣ, ಆರೋಗ್ಯ ಇಲಾಖೆಗಳು ಸಂಪೂರ್ಣವಾಗಿ ಪ್ರೋತ್ಸಾಹಿಸಿದ್ದು ಸ್ವಾಗತಾರ್ಹವಾಗಿದೆ ಎಂದರು.
ಮತಕ್ಷೇತ್ರದಲ್ಲಿನ ಎಲ್ಲ ಸರಕಾರಿ ಶಾಲೆಗಳ ಹೆಣ್ಣು ಮಕ್ಕಳಿಗೆ ಉಚಿತವಾಗಿ ಲಸಿಕೆಯನ್ನು ನೀಡಲು ಈಗಾಗಲೇ ಸೂಚಿಸಿದ್ದೇನೆ. ಮುಖ್ಯವಾಗಿ ಹೆಣ್ಣು ಮಕ್ಕಳ ಪಾಲಕರು ಲಸಿಕೆ ಪಡೆಯುವಂತೆ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಕಾರಣ ಹೆಣ್ಣು ಮಕ್ಕಳ ಆರೋಗ್ಯವನ್ನು ಸದೃಢಗೊಳಿಸಲು ಹೆಚ್.ಪಿ.ವಿ ಲಸಿಕೆ ಅಸ್ತ್ರವಾಗಿದ್ದು, ಗರ್ಭಕಂಠದ ಕ್ಯಾನ್ಸರ್‌ನ್ನು ತಡೆಗಟ್ಟಬಹುದು. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿನ ಖಾಸಗಿ ಶಾಲೆಗಳ ಹೆಣ್ಣು ಮಕ್ಕಳಿಗೂ ಹೆಚ್.ಪಿ.ವಿ ಲಸಿಕೆಯನ್ನು ವಿತರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಆರೋಗ್ಯ ಇಲಾಖೆಯ ಕೆ.ಎಲ್. ಹಾದಿಮನಿ ಹೆಚ್.ಪಿ.ವಿ ಲಸಿಕೆಯಿಂದಾಗುವ ಲಾಭದ ಕುರಿತು ಉಪನ್ಯಾಸ ನೀಡಿದರು. ಟಿ.ಈಶ್ವರ, ಐ.ಎಸ್. ಪಾಟೀಲ, ವಿ.ಆರ್. ಗುಡಿಸಾಗರ, ಬಿಇಒ ಎ.ಎನ್. ಕಂಬೋಗಿ, ಡಾ. ಶಕೀಲಅಹ್ಮದ್ ದುಂದರಗಿ, ಡಾ. ಬಿ.ಎಸ್. ಭಜಂತ್ರಿ, ಡಾ. ಎಲ್.ಡಿ. ಬಾಕಳೆ, ಬಸವರಾಜ ನವಲಗುಂದ, ಯೂಸುಫ್ ಇಟಗಿ, ಸಂಜಯ ದೊಡ್ಡಮನಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಹೆಚ್.ಪಿ.ವಿ ಲಸಿಕೆಯನ್ನು ಮೊದಲ ಹಂತದಲ್ಲಿ 864 ಹೆಣ್ಣು ಮಕ್ಕಳಿಗೆ ವಿತರಣೆ ಮಾಡಲಾಗಿದೆ. ಈಗ ಮೊದಲ ಲಸಿಕೆಯನ್ನು ಪಡೆದಿರುವ ಎಲ್ಲ 864 ಮಕ್ಕಳಿಗೂ ಎರಡನೇ ಲಸಿಕೆಯನ್ನು ವಿತರಿಸಲಾಗುತ್ತಿದೆ. ಯಾವ ಹೆಣ್ಣು ಮಕ್ಕಳ ಆರೋಗ್ಯದ ಮೆೇಲೆಯೂ ಲಸಿಕೆ ಕೆಟ್ಟ ಪರಿಣಾಮ ಬೀರಿಲ್ಲ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.



