ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಈ ಜಗತ್ತಿನ ಗೂಢವನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಇನ್ನೂ ಸಾಧ್ಯವಾಗಿಲ್ಲ. ಎಂದಿಗೆ ಸಾಧ್ಯವಾಗುತ್ತದೆಯೋ ಅದೂ ಗೊತ್ತಿಲ್ಲ. ಆದರೂ ನಾವು ನನಗೆಲ್ಲ ಗೊತ್ತು, ನಾನು ಬಹಳಷ್ಟನ್ನು ತಿಳಿದುಕೊಂಡಿದ್ದೇನೆ ಎಂದು ಹಾರಾಡುತ್ತೇವೆ. ಈ ಜಗತ್ತಿನಲ್ಲಿ ಎಲ್ಲವನ್ನೂ ತಿಳಿದವರು ಬಹಳಷ್ಟಿಲ್ಲ ಎಂದು ಹಾಲಕರೆಯ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಪುಣ್ಯಾರಾಧನೆ ಶತಮಾನೋತ್ಸವದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಆಶೀರ್ವಚನ ನೀಡಿದರು.
ಮಠಕ್ಕೆ ಬರುವಾಗ ನಾವು ನಮ್ಮ ಪ್ರಾಪಂಚಿಕ ವ್ಯವಹಾರಗಳನ್ನು ಮನೆಯಲ್ಲಿಯೇ ಬಿಟ್ಟು ಬರಬೇಕು. ಧ್ಯಾನಾಸಕ್ತರಾಗಿ ಕುಳಿತು ಭಗವಂತನ ಸ್ಮರಣೆ ಮಾಡಬೇಕು. ಅದರಲ್ಲೂ ವೀರಪ್ಪಜ್ಜನವರಂತಹ ಹಠಯೋಗಿಯ ಮಠಕ್ಕೆ ಬಂದಾಗ ನಮ್ಮ ಮೈ-ಮನಸ್ಸುಗಳೆರಡೂ ಅಜ್ಜನವರ ಕಡೆ ಕೇಂದ್ರೀಕೃತವಾಗಿರಬೇಕು. ಲೌಕಿಕದ ಭವಬಂಧನಗಳನ್ನು ಮೀರಿದಾಗ ಮಾತ್ರ ನಾವು ಆಧ್ಯಾತ್ಮದಲ್ಲಿ ಏನಾದರೂ ಸಾಧಿಸಲು ಸಾಧ್ಯ. ವೀರಪ್ಪಜ್ಜನವರು ಲಿಂಗೈಕ್ಯರಾಗಿ ನೂರು ವರ್ಷಗಳು ಸಂದ ಹಿನ್ನೆಲೆಯಲ್ಲಿ ಈ ಅದ್ಧೂರಿ ಸಮಾರಂಭವನ್ನು ಏರ್ಪಡಿಸಿದ್ದು ಸ್ತುತ್ಯ ಕಾರ್ಯ ಎಂದು ಶ್ರೀಗಳು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಬಾಲ್ಯದ ದಿನಗಳಿಂದಲೂ ತಮಗೂ ವೀರಪ್ಪಜ್ಜನವರ ಮಠಕ್ಕೂ ಇರುವ ಅವಿನಾಭಾವ ಸಂಬಂಧವನ್ನು ನೆನೆಸಿಕೊಂಡರು. ವೀರಪ್ಪಜ್ಜನವರಂತಹ ಮಹಾಮಹಿಮ ಈ ಕ್ಷೇತ್ರದಲ್ಲಿ ಅಭೂತಪೂರ್ವವಾದ ಸಾಧನೆಯನ್ನೇ ಮಾಡಿದ್ದಾನೆ ಎಂದರು.
ಅಬ್ಬಿಗೇರಿಯ ಶ್ರೀ ವೀರಭದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಅಜ್ಜನವರ ಜಾತ್ರೆಯ ಸೊಗಸನ್ನು ಸವಿದವರಿಗಷ್ಟೇ ಅಜ್ಜನವರ ಲೀಲಾ ಮಹಿಮೆ ಎಂತಹುದು ಎಂಬುದು ಗೊತ್ತು. ಅಜ್ಜನ ಆಶೀರ್ವಾದ ದೊರೆತರೆ ಜೀವನದಲ್ಲಿ ಉನ್ನತಿ ಸಾಧ್ಯ ಎಂದರು.
ಸಮಾರಂಭವನ್ನುದ್ದೇಶಿಸಿ ಚಂದನ ಶಾಲೆಯ ಅಧ್ಯಕ್ಷ ಟಿ. ಈಶ್ವರ ಮಾತನಾಡಿದರು. ವೇದಿಕೆಯ ಮೇಲೆ ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಎಂ.ಸಿ. ಚಪ್ಪನ್ನಮಠ, ಡಾ. ಕೆ.ಬಿ. ಧನ್ನೂರ ಉಪಸ್ಥಿತರಿದ್ದರು. ಡಾ. ವಿಶ್ವನಾಥ ಸ್ವಾಮೀಜಿ ಶ್ರೀ ವೀರಪ್ಪಜ್ಜನವರ ಅನೇಕ ಲೀಲೆಗಳನ್ನು ಜೀವನ ದರ್ಶನ ಪ್ರವಚನದಲ್ಲಿ ಹೇಳಿದರು.
ಗಾಯಕಿ ರಾಜಶ್ರೀ ಕುಲಕರ್ಣಿ ಪ್ರಾರ್ಥಿಸಿದರು. ಶಿವನಗೌಡ ಪಾಟೀಲ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ನಿರೂಪಿಸಿದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಶ್ರೀ ವೀರಪ್ಪಜ್ಜನವರ ಬಗ್ಗೆ ಇನ್ನೂ ಸಂಶೋಧನೆ ನಡೆಯಬೇಕು. ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಲು ಸಂಶೋಧಕರು ಮುಂದಾಗಬೇಕು. ಶ್ರೀ ವೀರಪ್ಪಜ್ಜನವರನ್ನು ಇನ್ನಷ್ಟು ತಿಳಿಯಲು ಇಲ್ಲೊಂದು ಸಂಶೋಧನಾ ಕೇಂದ್ರವಾಗಬೇಕು ಎಂಬ ಸಚಿವ ಎಚ್.ಕೆ. ಪಾಟೀಲ ಮತ್ತು ಟಿ. ಈಶ್ವರ ಮಾತುಗಳನ್ನು ತಾವೂ ಸಹ ಅನುಮೋದಿಸುವದಾಗಿ ಹೇಳಿದ ಪಾಟೀಲರು, ಈ ಪುಣ್ಯಾರಾಧನೆಯ ಶತಮಾನೋತ್ಸವದಲ್ಲಿ ಪಾಲ್ಗೊಂಡ ನಾವುಗಳೆಲ್ಲರೂ ಪುಣ್ಯವಂತರು ಎಂದರು.