ಸಾಮಾನ್ಯವಾಗಿ ದೇಹದಲ್ಲಿ ಉಷ್ಣತೆ ಜಾಸ್ತಿಯಾದಾಗ, ಹೆಚ್ಚು ನೀರಿನಲ್ಲಿ ಕಾಲನ್ನು ಇರಿಸಿ ಸರಿಯಾಗಿ ಒಣಗಿಸದೇ ಇದ್ದಾಗ ಹಿಮ್ಮಡಿಯಲ್ಲಿ ಬಿರುಕು ಉಂಟಾಗುತ್ತದೆ. ಚಳಿಗಾಲದಲ್ಲಿ ಈ ರೀತಿ ಹಿಮ್ಮಡಿ ಒಡೆಯುವುದು ಹೆಚ್ಚು. ಈ ರೀತಿ ಹಿಮ್ಮಡಿ ಒಡೆಯುವುದನ್ನು ನಿಯಂತ್ರಿಸಿ, ಚೆಂದದ ಹಿಮ್ಮಡಿ ಪಡೆದುಕೊಳ್ಳಲು ಮನೆಯಲ್ಲಿ ಯಾವ ರೀತಿ ಆರೈಕೆ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಎಣ್ಣೆ:
ಮನೆಯಲ್ಲಿರುವ ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ ಅಥವಾ ಯಾವುದೇ ತರಕಾರಿ ಎಣ್ಣೆಯನ್ನು ಆಗಾಗ ಹಚ್ಚುತ್ತಿದ್ದರೆ ಒಡೆದ ಹಿಮ್ಮಡಿ ಬೇಗ ಸರಿಯಾಗುತ್ತದೆ. ರಾತ್ರಿ ಮಲಗುವ ಮೊದಲು ನಿಮ್ಮ ಪಾದಗಳನ್ನು ಅರ್ಧ ಗಂಟೆ ನೀರಿನಲ್ಲಿ ಮುಳುಗಿಸಿ. ನಂತರ ಹಿಮ್ಮಡಿಗೆ ಮೆದುವಾಗಿ ಮಸಾಜ್ ಮಾಡಿ. ನಂತರ ಯಾವುದಾದರೂ ಎಣ್ಣೆಯನ್ನು ಹಚ್ಚಿಕೊಂಡು, ಸಾಕ್ಸ್ ಹಾಕಿಕೊಳ್ಳಿ.
ಲಿಂಬೆ ಹಣ್ಣು:
ಆ್ಯಸಿಡಿಕ್ ಅಂಶವಿರುವ ಲಿಂಬೆ ಹಣ್ಣಿನಿಂದ ಒಡೆದ ಹಿಮ್ಮಡಿ ಬೇಗ ಸರಿಯಾಗುತ್ತದೆ. ಉಗುರು ಬೆಚ್ಚಗಿನ ನೀರಿಗೆ ಲಿಂಬೆ ಹಣ್ಣಿನ ರಸವನ್ನು ಹಾಕಿ. ಆ ನೀರಿನಲ್ಲಿ ನಿಮ್ಮ ಕಾಲನ್ನು ಮುಳುಗಿಸಿಡಿ. ನಂತರ ಹಿಮ್ಮಡಿಯನ್ನು ಮಸಾಜ್ ಮಾಡಿ. ಅಥವಾ ಕಲ್ಲಿನ ಮೇಲೆ ಕಾಲನ್ನು ಉಜ್ಜಿರಿ. ನಂತರ ಆ ಕಾಲನ್ನು ನೀರಿನಿಂದ ತೊಳೆದು, ಟವೆಲ್ನಿಂದ ಒರೆಸಿಕೊಳ್ಳಿ.
ಹಣ್ಣುಗಳು:
ಬೆಣ್ಣೆ ಹಣ್ಣು, ಪಪ್ಪಾಯ, ಪೈನಾಪಲ್, ಬಾಳೆ ಹಣ್ಣು ಮುಂತಾದ ಹಣ್ಣುಗಳಿಂದ ಹಿಮ್ಮಡಿಯ ಬಿರುಕು ಬೇಗ ಸರಿಯಾಗುತ್ತದೆ. ಬೆಣ್ಣೆ ಹಣ್ಣು, ತುರಿದ ತೆಂಗಿನಕಾಯಿ, ಬಾಳೆಹಣ್ಣನ್ನು ಸರಿಯಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಒಡೆದ ಹಿಮ್ಮಡಿಯ ಜಾಗಕ್ಕೆ ಹಚ್ಚಿರಿ. ಹಿಮ್ಮಡಿಗೆ ಆ ಮಿಶ್ರಣದಿಂದ ಮಸಾಜ್ ಮಾಡಿ. ಅದಾದ 15 ನಿಮಿಷಗಳ ನಂತರ ತಣ್ಣೀರಿನಿಂದ ಕಾಲನ್ನು ತೊಳೆಯಿರಿ. ಪಪ್ಪಾಯ ಹಣ್ಣನ್ನು ಕೂಡ ಹಿಮ್ಮಡಿಗೆ ಮಸಾಜ್ ಮಾಡಬಹುದು.
ಅಕ್ಕಿ ಹಿಟ್ಟು:
ಒಂದು ಮುಷ್ಠಿ ಅಕ್ಕಿ ಹಿಟ್ಟನ್ನು ಒಂದು ಬೌಲ್ಗೆ ಹಾಕಿ. ಅದಕ್ಕೆ 2 ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ. ಅದಕ್ಕೆ ಸ್ವಲ್ಪ ವನೇಗರ್ ಸೇರಿಸಿ, ಪೇಸ್ಟ್ ಮಾಡಿಕೊಳ್ಳಿ. ನಂತರ ಆ ಪೇಸ್ಟನ್ನು ಒಡೆದ ಹಿಮ್ಮಡಿಯ ಮೇಲೆ ಹಚ್ಚಿ ಮಸಾಜ್ ಮಾಡಿ. ಹಿಮ್ಮಡಿಯ ಬಿರುಕು ಆಳವಾಗಿದ್ದರೆ ಆ ಮಿಶ್ರಣದ ಮೇಲೆ ಸ್ವಲ್ಪ ಆಲಿವ್ ಎಣ್ಣೆ ಹಚ್ಚಿ. ಈ ಮಿಶ್ರಣವನ್ನು ಹಚ್ಚಿಕೊಳ್ಳುವ ಮೊದಲು ಕಾಲನ್ನು ಸ್ವಚ್ಛವಾಗಿ ತೊಳೆದುಕೊಳ್ಳಲು ಮರೆಯಬೇಡಿ.
ಬೇವಿನ ಎಲೆ:
ಬೇವಿನ ಎಲೆ ಮತ್ತು ಅರಿಶಿಣ ಗಾಯವಾದ ಜಾಗಕ್ಕೆ ಅಥವಾ ಬಿರುಕು ಬಿಟ್ಟ ಜಾಗವನ್ನು ಸರಿಯಾಗಿಸಲು ಬಹಳ ಸಹಾಯಕಾರಿ. ಬೇವಿನ ಎಲೆ ಹಾಗೂ ಅರಿಶಿಣವನ್ನು ರೊಬ್ಬಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಹಿಮ್ಮಡಿಗೆ ಹಚ್ಚಿರಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತೊಳೆಯಿರಿ.
ರೋಸ್ ವಾಟರ್:
ಗ್ಲಿಸರಿನ್ ಅಥವಾ ರೋಸ್ ವಾಟರ್ನಿಂದ ಹಿಮ್ಮಡಿಯ ಗಾಯವನ್ನು ಬೇಗ ಸರಿ ಮಾಡಬಹುದು. ಇವೆರಡನ್ನೂ ರಾತ್ರಿ ಮಲಗುವ ಮೊದಲು ಹಿಮ್ಮಡಿಯ ಗಾಯಕ್ಕೆ ಹಚ್ಚಿರಿ.