ಜೀವನದಲ್ಲಿ ಆಧ್ಯಾತ್ಮಿಕ ಚಿಂತನೆಗಳ ಅವಶ್ಯಕತೆಯಿದೆ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ: ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧಾರ್ಮಿಕ ಸಂಸ್ಕಾರಗಳು ಮುಖ್ಯ. ಅರಿವುಳ್ಳ ಮಾನವ ಜೀವನದಲ್ಲಿ ಒಂದಿಷ್ಟಾದರೂ ಆಧ್ಯಾತ್ಮಿಕ ಚಿಂತನೆಗಳ ಅವಶ್ಯಕತೆಯಿದೆ. ಸದೃಢ ಸಮಾಜ ನಿರ್ಮಾಣಕ್ಕೆ ವೀರಶೈವ ಪೀಠ, ಮಠಗಳ ಕೊಡುಗೆ ಅಪಾರವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಜರುಗಿದ ಲಿಂ.ಶ್ರೀ ರಂಭಾಪುರಿ ವೀರರುದ್ರಮುನೀಶ್ವರ ಜಗದ್ಗುರುಗಳ ಜನ್ಮ ಶತಮಾನೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿಗೆ ಬೆಳ್ಳಿ ಕವಚ ಸಮರ್ಪಣೆ, ನಡುವಿನಮಠದ ಪುನರುತ್ಥಾನ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ಅತ್ಯಂತ ಪ್ರಾಚೀನವಾದುದು. ಇದರ ಪರಂಪರೆ ಮತ್ತು ಬೆಳೆದುಬಂದ ಸಂಸ್ಕೃತಿ ಮಾನವ ಜನ ಸಮುದಾಯದ ಮೇಲೆ ಆಗಾಧ ಪರಿಣಾಮವನ್ನು ಬೀರಿವೆ. ಕರ್ಮ ಕಳೆದು, ಧರ್ಮ ಬಿತ್ತಿ ಬದುಕು ಬಂಗಾರಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ನಡುವಿನ ಮಠದ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಬೆಳ್ಳಿ ಕವಚ ಅರ್ಪಿಸುತ್ತಿರುವುದು ತಮ್ಮೆಲ್ಲರ ಧರ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ.

ಹಾವೇರಿ ನಗರದ ನಡುವಿನ ಮಠದಲ್ಲಿ ಲಿಂ. ಶ್ರೀ ವೀರರುದ್ರಮುನಿ ಜಗದ್ಗುರುಗಳು ಒಂದು ತಿಂಗಳ ಕಾಲ ಶ್ರಾವಣ ತಪೋನುಷ್ಠಾನ ನೆರವೇರಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಸಂಸ್ಥಾಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಪರಮ ಪೂಜ್ಯರ ಜನ್ಮ ಶತಮಾನೋತ್ಸವ ಇದೇ ಸಂದರ್ಭದಲ್ಲಿ ಸಂಯೋಜಿಸಿರುವುದು ತಮ್ಮೆಲ್ಲರ ಗುರು ಪೀಠದ ಅಭಿಮಾನಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ. ಲಿಂ. ಶ್ರೀ ಜಗದ್ಗುರು ವೀರರುದ್ರಮುನಿ ಶಿವಾಚಾರ್ಯರು 19 ವರುಷಗಳ ಕಾಲ ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳಾಗಿ ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳ ಮೂಲಕ ಜನಮನವನ್ನು ತಲುಪಿದ ಮಹಾಚೇತನವದು. ಅಂಥವರ ಜನ್ಮ ಶತಮಾನೋತ್ಸವ ಆಚರಣೆ ಸಮಾಜ ಬಾಂಧವರ ಸಂತೋಷಕ್ಕೆ ಕಾರಣವಾಗಿದೆ.

ಎಸ್.ಬಿ. ಹಿರೇಮಠ ಇವರು ಕಾರ್ಯಕ್ರಮದ ಸಂಚಾಲಕರಾಗಿ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ್ದನ್ನು ಸ್ಮರಿಸಿದರು. ಹಾವೇರಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಹರಸೂರು ಬಣ್ಣದ ಮಠದ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ದಾನಿಗಳಾದ ಈಶ್ವರಯ್ಯ ನಡುವಿನಮಠ ಮತ್ತು ಶಿವಯ್ಯ ನಡುವಿನಮಠ ಸಹೋದರರಿಗೆ ವಿಶೇಷವಾದ ಗುರುರಕ್ಷೆಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಸೇವಾ ಸಮಿತಿ ಅಧ್ಯಕ್ಷರನ್ನು ಮೊದಲ್ಗೊಂಡು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಶ್ರೀಮದ್ ರಂಭಾಪುರಿ ಶಾಖಾ ನಡುವಿನ ಮಠದ ಪುನರುತ್ಥಾನಗೊಳಿಸುವ ಸತ್ಯ ಸಂಕಲ್ಪ ಕೈಗೊಂಡು ಇಂದು ಶಿಲಾನ್ಯಾಸ ನೆರವೇರಿಸಿರುವುದು ಅತ್ಯಂತ ಸಂತೋಷದ ಸಂಗತಿ. ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ನಡುವಿನ ಮಠದ ಬಂಧುಗಳು ಜೀರ್ಣೋದ್ಧಾರಕ್ಕೆ ಮುಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಸೇವಾ ಸಮಿತಿಯವರು ಶ್ರದ್ಧಾ ಪೂರ್ವಕ ಕಾರ್ಯ ನಿರ್ವಹಿಸುತ್ತಿರುವುದು ಎಲ್ಲ ಭಕ್ತರಿಗೂ ಹರುಷವನ್ನು ಉಂಟು ಮಾಡಿದೆ ಎಂದು ರಂಭಾಪುರಿ ಶ್ರೀಗಳು ತಿಳಿಸಿದರು.


Spread the love

LEAVE A REPLY

Please enter your comment!
Please enter your name here