ವಿಜಯಪುರ: ಜಾತಿಗಣತಿ ಬಗ್ಗೆ ಕಾಂಗ್ರೆಸ್ ಸಚಿವ ಸಂಪುಟದಲ್ಲೇ ಗೊಂದಲ ಉಂಟಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜಾತಿಗಣತಿ ಬಗ್ಗೆ ಅವರ ಸಚಿವ ಸಂಪುಟದಲ್ಲೇ ಗೊಂದಲ ಉಂಟಾಗಿದೆ. ಹೀಗಾಗಿ ಸಿದ್ದರಾಮಯ್ಯನವರು ಜಾತಿಗಣತಿಯನ್ನು ಕೈಬಿಡಬೇಕು ಎಂದರು.
ಇನ್ನೂ ಹೇಗಿದ್ದರೂ ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತೆ. ಕೇವಲ ಕೇಂದ್ರಕ್ಕೆ ಮಾತ್ರ ಜಾತಿಗಣತಿ ನಡೆಸಲು ಅಧಿಕಾರವಿದೆ. ರಾಜ್ಯಕ್ಕೆ ಅಧಿಕಾರವಿಲ್ಲ. ಆದರೆ ಇವರು ಸುಮ್ಮನೇ ರಾಜ್ಯದ ಜನರ ದಾರಿ ತಪ್ಪಿಸಲು, ರಾಜ್ಯದಲ್ಲಿ ಲಿಂಗಾಯರು, ಒಕ್ಕಲಿಗರು ಕಡಿಮೆ ಇದ್ದಾರೆ ಎಂದು ತೋರಿಸಲು ಮತ್ತು ಅಲ್ಪಸಂಖ್ಯಾತ ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ತೋರಿಸಲು ಸಿದ್ದರಾಮಯ್ಯನ ನಾಟಕವಿದು ಎಂದು ಆಗ್ರಹಿಸಿದರು.
ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ ಎಂದು ಮಾಡಿರುವ ವರ್ಗಗಳನ್ನು ಈ ಮೊದಲು ಸೋನಿಯಾ ಗಾಂಧಿ ವ್ಯವಸ್ಥಿತವಾಗಿ ಹೊಸ ಹೊಸ ನಾಮಗಳನ್ನು ಕೊಟಿದ್ದರು. ಅವರು ಇಡೀ ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರ ಅಥವಾ ಮುಸ್ಲಿಂ ರಾಷ್ಟ್ರ ಮಾಡಬೇಕೆಂದುಕೊಂಡಿದ್ದಾರೆ.
ಈ ಸಂಚಿನ ಹಿನ್ನೆಲೆ ಇದೀಗ ಈ ರಾಜ್ಯದಲ್ಲಿ ಜಾತಿವರ್ಗೀಕರಣ ಮಾಡಿದ್ದಾರೆ. ಆ ಜಾತಿಗಳು ನಮ್ಮ ದೇಶದಲ್ಲಿಯೇ ಇಲ್ಲ. ಭಾರತದಲ್ಲಿಯೂ ಇಲ್ಲ. ವಿಶ್ವದಲ್ಲಿಯೂ ಇಲ್ಲ. ಕೇವಲ ಸೋನಿಯಾ ಗಾಂಧಿಯ ನಿರ್ದೇಶನದಂತೆ ಸಿದ್ದರಾಮಯ್ಯನವರು ಇಂತಹ ಅತ್ಯಂತ ಕೀಳು ಮಟ್ಟದ ವ್ಯವಸ್ಥೆಯನ್ನು ರಾಜ್ಯದಲ್ಲಿ ಮಾಡಿದ್ದಾರೆ ಎಂದು ಕಿಡಿಕಾರಿದರು.