ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಕೈಗಾರಿಕೆಗಳಿಗೆ ದೇಶ ಮತ್ತು ರಾಜ್ಯದಲ್ಲಿ ಪ್ರತ್ಯೇಕ ಕೈಗಾರಿಕಾ ನೀತಿ ಅಗತ್ಯವಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಗದಗ ವಾಣಿಜ್ಯೋದ್ಯಮ ಸಂಸ್ಥೆಯ 50 ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಸಣ್ಣ ಕೈಗಾರಿಕೆ ಉದ್ಯಮಿಗಳು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರದ ಕಣ್ಣು ತೆರೆಸಬೇಕು. ಬೆಂಗಳೂರಿನಲ್ಲಿ ಕೈಗಾರಿಕೆ, ಉದ್ಯಮಿಗಳಿಗೆ ಹೆಚ್ಚಿನ ಅನುಕೂಲಗಳಿವೆ. ಆದರೆ ಗದುಗಿನಂತಹ ಜಿಲ್ಲೆಗಳಲ್ಲಿ ಇರುವ ಸಣ್ಣ ಕೈಗಾರಿಕೆ ಹೆಚ್ಚಿನ ಅನುಕೂಲ (ಈಸ್ ಆಫ್ ಬ್ಯುಸಿನೆಸ್) ಇಲ್ಲ. ಸಣ್ಣ ಕೈಗಾರಿಕೆಗಳು ಹೋರಾಟ ಮೂಲಕವೇ ಅಸ್ತಿತ್ವ ಕಂಡುಕೊಳ್ಳಬೇಕಿದೆ. ಸಣ್ಣ ಕೈಗಾರಿಕೆ ಬಗ್ಗೆ ದೇಶದಲ್ಲೇ ನಿರ್ಲಕ್ಷ್ಯ ಮಾಡಲಾಗಿದೆ. ಬೃಹತ್ ಕೈಗಾರಿಕೆಗಳಿಗೆ ಸಿಗುವಂತೆ ಸುಲಭ ಅನುಮತಿಗಳು ಸಣ್ಣ ಕೈಗಾರಿಕೆಗಳು ಸಿಗುತ್ತಿಲ್ಲ ಎಂಬ ನೋವು ನನಗೂ ಇದೆ. ವಾಣಿಜ್ಯೋದ್ಯಮ ಸಂಸ್ಥೆಗೂ ಇದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಜಿ.ಎಸ್. ಪಾಟೀಲ, ಉದ್ದಿಮೆದಾರರಿಗೆ ಉಪಯೋಗ ಆಗುವ ಎಲ್ಲ ಕಾರ್ಯಗಳನ್ನು ಗದಗ ವಾಣಿಜ್ಯೋದ್ಯಮ ಸಂಸ್ಥೆ ಮಾಡುತ್ತ ಬಂದಿದೆ. ಆಧುನಿಕ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾಣೆಗಳನ್ನು ಕಾಣುತ್ತಿದ್ದೇವೆ. ಇಂತಹ ವ್ಯವಸ್ಥೆಯಲ್ಲಿ ಸಂಸ್ಥೆ 50 ವರ್ಷ ನಿರಂತರ ಸೇವೆ ನೀಡಿದ್ದು ಅಭಿನಂದನಾರ್ಹ ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಮಾತನಾಡಿ, ಮಕ್ಕಳಿಗೆ ನೀಟ್ ಪರೀಕ್ಷೆ ಬರೆಯುವುದನ್ನು ಕಲಿಸುತ್ತೇವೆ. ಆದರೆ ನೀಟಾಗಿ ಬದುಕುವುದನ್ನು ಕಲಿಸಲಿಲ್ಲ. ಎಲ್ಲವನ್ನೂ ಪಡೆಯುವುದಕ್ಕಾಗಿ ಆರೋಗ್ಯ ಮತ್ತು ಆನಂದದಿಂದ ಇರುವುದನ್ನು ಕಲಿಸಬೇಕು. ಮನೆಯಲ್ಲಿ ನೋಟಿನ ಕಟ್ಟು ಇದ್ದವರು ಶ್ರೀಮಂತರಲ್ಲ. ಮೊಣಕಾಲು ಗಟ್ಟಿ ಇದ್ದವನು ಶ್ರೀಮಂತ ಎಂದು ಹೇಳಿದರು.
ವಾಣಿಜ್ಯೋದ್ಯಮ ಸಂಸ್ಥೆಯವರಿಗೆ ಹೇಗೆ ಉದ್ಯಮ ಮಾಡಬೇಕು ಎಂದು ಹೇಳುವುದು ಅನವಶ್ಯಕ. ಆದರೆ, ಹಣ ಜಗತ್ತನ್ನು ಆಳುವುದಿಲ್ಲ. ವಿಚಾರಗಳು ಜಗತ್ತನ್ನು ಆಳುತ್ತವೆ. ಮನುಷ್ಯನಿಗೆ ದುಡಿಮೆ ಬಹಳ ಮುಖ್ಯ. ಆರೋಗ್ಯವಂತರಾಗಲು ದುಡಿಮೆ ಬಹುಮುಖ್ಯ. ಮನೆಯನ್ನು ವಾಸ್ತು ಪ್ರಕಾರ ಕಟ್ಟಬೇಕು. ಅಷ್ಟೇ ಮನಸ್ಸನ್ನು ಕೂಡ ವಾಸ್ತು ಪ್ರಕಾರ ಕಟ್ಟಬೇಕು. ಅಂದಾಗ ಮಾತ್ರ ಮನಸ್ಸಿಗೆ ನೆಮ್ಮದಿ ಇರುತ್ತದೆ ಎಂದರು.
ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ನರಸಾಪುರ ಕೈಗಾರಿಕಾ ವಲಯದ ನಿವೇಶನಗಳನ್ನು ಮೂಲ ದರಕ್ಕೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು. ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ಗದಗ ಅಧ್ಯಕ್ಷ ತಾತನಗೌಡರ ಪಾಟೀಲ ಕಾರ್ಯಪ್ರವೃತ್ತಿ ಎಲ್ಲರೂ ಅಭಿಮಾನ ಪಡುವಂತಿದೆ ಎಂದರು.
ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳಿಗೆ ವಾಣಿಜ್ಯೋದ್ಯಮ ಸಂಸ್ಥೆಯಿಂದ ಗೌರವ ಸಮರ್ಪಿಸಲಾಯಿತು. ಎಸ್.ಪಿ. ಸಂಶಿಮಠ, ಸೋಮನಾಥ ಜಾಲಿ, ಆನಂದ ಎಲ್.ಪೋತ್ನಿಸ್, ಶರಣಬಸಪ್ಪ ಗುಡಿಮನಿ, ವಿಜಯಕುಮಾರ ಎಸ್.ಮಾಟಲದಿನ್ನಿ, ಶಿವಯ್ಯ ಆರ್.ನಾಲತ್ವಾಡಮಠ, ಅಶೋಕಗೌಡ ಕೆ.ಪಾಟೀಲ, ರಾಘವೇಂದ್ರ ಎಸ್.ಕಾಲವಾಡ, ಸಂಜಯ ಸಿ.ಬಾಗಮಾರ, ನಂದಾ ಸಿ.ಬಾಳಿಹಳ್ಳಿಮಠ, ದೀಪಾ ಎಸ್.ಗದಗ, ಸುಷ್ಮಾ ಎಸ್.ಜಾಲಿ, ಸುಜಾತ ಎಸ್.ಗುಡಿಮನಿ, ಜ್ಯೋತಿ ಆರ್.ದಾನಪ್ಪಗೌಡ್ರ, ಲಲಿತಾ ಜಿ.ತಡಸದ, ಸುಧಾ ಸಿ.ಹುಣಸಿಕಟ್ಟಿ, ಪೂರ್ಣಿಮಾ ಕೆ.ಆಟದ ಮುಂತಾದವರು ಉಪಸ್ಥಿತರಿದ್ದರು.
ನಗರಕ್ಕೆ ಎಚ್.ಕೆ. ಪಾಟೀಲರು ವ್ಯಾಪಾರ, ಅಭಿವೃದ್ಧಿ, ಸಾಂಸ್ಕೃತಿಕ ಬೆಳವಣಿಗೆಗೆ ಉತ್ತಮ ಪ್ರಾಧಿಕಾರ ತಂದಿದ್ದಾರೆ. ಅದಕ್ಕಾಗಿ ಪಿಪಿಪಿ ಮಾಡಲ್‌ನಲ್ಲಿ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಸರ್ಕಾರದಿಂದ ವಕಾರ ಸಾಲು ಅಭಿವೃದ್ಧಿ ಪ್ರಾಧಿಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಈ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.