ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, 5 ವರ್ಷ ಸಿದ್ದರಾಮಯ್ಯ ಫಿಕ್ಸ್ ಎಂದು ಆರ್. ವಿ ದೇಶಪಾಂಡೆ ಹೇಳಿದ್ದಾರೆ. ಸಿಎಂ ಸ್ಥಾನದ ತಪ್ಪಿದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗೋ ಅರ್ಹತೆ ಇತ್ತು. ಆದರೆ ಆಗಲಿಲ್ಲ. ಆದ್ರೀಗ ಸಿಎಂ ಸ್ಥಾನಕ್ಕಿಂತ ದೊಡ್ಡ ಸ್ಥಾನವಾದ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಇದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಜೊತೆ ನಾವು ಕೆಲಸ ಮಾಡಿದ್ದೇವೆ. ಧರ್ಮಸಿಂಗ್ ಹಾಗೂ ಎಸ್.ಎಂ ಕೃಷ್ಣ ಸರ್ಕಾರದಲ್ಲಿ ಖರ್ಗೆ ಅವರು ಸಚಿವರಿದ್ರು. ಖರ್ಗೆಯವರಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇತ್ತು. ಆ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ಮಾಡಿ ಎಸ್.ಎಂ ಕೃಷ್ಣ ಅವರನ್ನ ಸಿಎಂ ಮಾಡಿತ್ತು. ಅದನ್ನ ನಾವೆಲ್ಲಾ ಒಪ್ಪಿಕೊಂಡಿದ್ದೆವು ಎಂದಿದ್ದಾರೆ.
ಖರ್ಗೆ ಅವರು ಇವತ್ತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ಸಿಎಂ ಆಗುವ ಎಲ್ಲಾ ಅರ್ಹತೆ ಅವರಿಗೆ ಇದೆ. ಅವರಿಗೆ ಅದಕ್ಕಿಂತ ಹೆಚ್ಚಿನ ಸ್ಥಾನ ಸಿಕ್ಕಿದೆ. ಅದಕ್ಕೆ ನಮಗೆಲ್ಲಾ ಹಾಗೂ ನಾಡಿಗೂ ಅಭಿಮಾನ ಇದೆ. ನಮ್ಮ ದೃಷ್ಟಿಯಲ್ಲಿ ರಾಷ್ಟ್ರ ಅಧ್ಯಕ್ಷ ಎಂದರೆ ಸಿಎಂಗಿಂತ ದೊಡ್ಡ ಸ್ಥಾನ. ಅವರ ಮಾತನ್ನ ನಮ್ಮ ಸಿಎಂ ಕೇಳಬೇಕು. ತೆಲಂಗಾಣ ಸಿಎಂ ಕೂಡಾ ಕೇಳಬೇಕಾಗುತ್ತದೆ. ಅವರಿಗೆ ಅಂತಹ ಗೌರವ ಸ್ಥಾನ ಇದೆ ಎಂದು ಹೇಳಿದ್ದಾರೆ.
ಖರ್ಗೆ ಅವರು ಎಲ್ಲಿಯೂ ಕೂಡ ಸಿಎಂ ಆಗ್ತೀನಿ ಎಂದು ಹೇಳಿಲ್ಲ. ಅವರಿಗೆ ಅವಕಾಶ ಮಾತ್ರ ಇರಲಿಲ್ಲ. ನನಗೂ ಸಿಎಂ ಆಗುವ ಅರ್ಹತೆ ಇತ್ತು. ಆದರೆ ಅವಕಾಶ ಸಿಕ್ಕಿಲ್ಲ. ಏನು ಮಾಡೋದು ಈಗ ಅಂತ ಹೇಳಿದ್ದಾರೆ. ಅವರಿಗೆ ಅವಕಾಶ ಇದ್ದಿದ್ದು ನಿಜ, ಅರ್ಹತೆ ಇದ್ದಿದ್ದು ನಿಜ. ಆದರೆ ಅವರು ಅಧಿಕಾರದ ಹಿಂದೆ ಬಿದ್ದವರಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.