ಶಿವಮೊಗ್ಗ: ಬಳ್ಳಾರಿಯಲ್ಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರ ನಿವಾಸದ ಎದುರು ನಡೆದ ಘಟನೆ ಸಾಮಾನ್ಯ ಗಲಾಟೆಯಲ್ಲ, ಕಾಂಗ್ರೆಸ್ ಬೆಂಬಲಿತ ಗೂಂಡಾಗಳಿಂದ ನಡೆಸಲಾದ ಪೂರ್ವನಿಯೋಜಿತ ಹಾಗೂ ಸರ್ಕಾರಿ ಪ್ರಾಯೋಜಿತ ದುಷ್ಕೃತ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ವಿಜಯೇಂದ್ರ, ಜನಾರ್ಧನ ರೆಡ್ಡಿ ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆಯ ಬ್ಯಾನರ್ ಅಳವಡಿಕೆಯನ್ನು ನೆಪವನ್ನಾಗಿ ಮಾಡಿಕೊಂಡು, ಬಳ್ಳಾರಿಯಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದಿಲ್ಲ. ನಾಗರಿಕರು ನೆಮ್ಮದಿಯಾಗಿ ಬದುಕಲು ಸಾಧ್ಯವಾಗದಂತಹ ಭಯದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಅವರ ಬೆಂಬಲಿಗರು ದುಷ್ಕೃತ್ಯ ನಡೆಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಜನಾರ್ಧನ ರೆಡ್ಡಿ ಬಿಜೆಪಿಗೆ ಮರು ಸೇರ್ಪಡೆಯಾದ ನಂತರ ಬಳ್ಳಾರಿಯಲ್ಲಿ ಬಿಜೆಪಿ ಸಂಘಟನೆ ಬಲಗೊಳ್ಳುತ್ತಿದೆ. ಜೊತೆಗೆ ಜನಾರ್ಧನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ಅವರ ನಡುವಿನ ಬಾಂಧವ್ಯ ಪುನಃ ಗಟ್ಟಿಯಾಗಿರುವುದು ರಾಜಕೀಯ ದುಷ್ಟಶಕ್ತಿಗಳಿಗೆ ಅಸಹ್ಯವಾಗುತ್ತಿದೆ. ಅದೇ ಕಾರಣಕ್ಕೆ ಇಂತಹ ಹಿಂಸಾತ್ಮಕ ಘಟನೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.
ವಿಪರ್ಯಾಸವೆಂದರೆ, ಬಳ್ಳಾರಿಯ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತೆ ಕಾರ್ಯನಿರ್ವಹಿಸುತ್ತಿವೆ. ಪೊಲೀಸರು ಕಾಂಗ್ರೆಸ್ ಕೈಗೊಂಬೆಗಳಾಗಿ ವರ್ತಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ಈ ದುರ್ಘಟನೆ ಸಂಭವಿಸದೇ ಇರಬಹುದಿತ್ತು ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಬಿಜೆಪಿ ಪ್ರಮುಖ ನಾಯಕರಿಗೆ ಕೂಡಲೇ ಸೂಕ್ತ ಭದ್ರತೆ ಒದಗಿಸಬೇಕು. ಜೊತೆಗೆ ಈ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿ ಸಂಪೂರ್ಣ ಸತ್ಯವನ್ನು ಹೊರತರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.



