ಮಕ್ಕಳಿಗಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ: ಸಚಿವ ಎಚ್.ಕೆ.ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳಿಗಿಂತ ದೊಡ್ಡ ಸಂಪತ್ತು ಇಲ್ಲ. ಮಕ್ಕಳ ಮೂಲಕ ಭಗವಂತನ ಸೇವೆ ಮಾಡುವ, ಭಗವಂತನನ್ನು ಕಾಣಲು ತನ್ನನ್ನ ಸಮರ್ಪಿಸಿಕೊಂಡಿರುವ ಸೇವಾ ಭಾರತಿಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ಅವರು ರವಿವಾರ ಬೆಟಗೇರಿಯ ಹೆಲ್ತ್ಕ್ಯಾಂಪ್‌ನಲ್ಲಿರುವ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಗೊಂಡ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಕೇರಳ (ವಕ್ಕಡಪುರಂ) ಹಾಗೂ ಚಿಕ್ಕಮಂಗಳೂರಿನ (ಮೇಗೂರ) ಮಕ್ಕಳಿಲ್ಲದ ದಂಪತಿಗಳಿಗೆ ಕಾನೂನಿನ ಚೌಕಟ್ಟಿನಡಿ ದತ್ತು ಮಗವನ್ನಾಗಿ ಹಸ್ತಾಂತರಿಸಿ ಮಾತನಾಡಿದರು.

ಮಗು ಎಲ್ಲಿ ಜನಸಿದೆ ಎಂಬುದು ಮುಖ್ಯವಲ್ಲ. ದತ್ತು ಪಡೆದ ಪೋಷಕರ ಮಡಿಲಿಗೆ ಮಗುವನ್ನು ಹಾಕಿದ ನಂತರ ಇಂದಿಗೆ ಮಗುವಿಗೆ ಪುನರ್ಜನ್ಮ ಸಿಕ್ಕಂತಾಯಿತು. ಮಕ್ಕಳನ್ನು ಬೆಳೆಸಿ, ದೇಶದ ಉತ್ತಮ ನಾಗರಿಕರನ್ನಾಗಿ ಮಾಡುವ ಹೊಣೆಗಾರಿಕೆ ದತ್ತು ಪಡೆದವರ ಮೇಲಿದೆ. ಸೇವಾ ಭಾರತಿ ಸಂಸ್ಥೆ ಮಾಡುತ್ತಿರುವ ಸೇವೆ ಅದ್ಭುತ ಸೇವೆ. ಭಗವಂತನ ಸೇವೆಗೆ ಮತ್ತೊಂದು ಸ್ವರೂಪವೇ ಈ ಸಂಸ್ಥೆಯ ಸೇವೆಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ವಹಿಸಿದ್ದರು. ವೇದಿಕೆಯ ಮೇಲೆ ಬಿ.ಬಿ. ಅಸೂಟಿ, ಆಶಾ ಶೆಟ್ಟರ ಉಪಸ್ಥಿತರಿದ್ದರು. ಉಮಾ ಚನ್ನಪ್ಪನವರ ಪ್ರಾರ್ಥಿಸಿದರು, ಪ್ರಾ. ಮಾರುತಿ ಕಟ್ಟಿಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನರಸಿಂಹ ಕಾಮಾರ್ತಿ ನಿರೂಪಿಸಿದರು. ಕಾರ್ಯದರ್ಶಿ ರಾಜೇಶ ಖಟವಟೆ ವಂದಿಸಿದರು.

ಸಮಾರಂಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಬಸವರಾಜ ಸಂಶಿ, ಡಿ.ಐ. ಈರಗಾರ, ಸುಪರ್ಣಾ ಬ್ಯಾಹಟ್ಟಿ, ಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ನಾಗವೇಣಿ ಕಟ್ಟಿಮನಿ, ಗವಿಸಿದ್ಧಪ್ಪ ಕೊಣ್ಣೂರ, ಚನ್ನವೀರಪ್ಪ ಚನ್ನಪ್ಪನವರ, ಶಿವಕುಮಾರ ಸಣಕಲ್ಲ, ಲಲಿತಾಬಾಯಿ ಮೇರವಾಡೆ, ಅರುಣ ರಾಜಪುರೋಹಿತ ಸೇರಿದಂತೆ ಲುಕ್ಕಣಸಾಬ ರಾಜೋಳಿ, ಜಯರಾಜ ಮುಳಗುಂದ, ಪ್ರಮೋದ ಹಿರೇಮಠ, ಶ್ರೀಧರ ಕಾಂಬಳೆ, ಅಭಿಷೇಕ ಮಾಳೋದೆ, ಜ್ಯೋತಿ ಸಂಗಮದ ಮುಂತಾದವರಿದ್ದರು.

ಕೆಲವು ದಂಪತಿಗಳು ಮಕ್ಕಳಿಲ್ಲದೇ ಕೊರಗುತ್ತಿದ್ದಾರೆ. ಮಗುವನ್ನು ಪಡೆದ ಪೋಷಕರು ಪುಣ್ಯವಂತರು. ದತ್ತು ಪಡೆದ ಪೋಷಕರು ಮಕ್ಕಳನ್ನು ಸಾಕುವ, ಶಿಕ್ಷಣ ಕೊಡಿಸುವ, ಉತ್ತಮ ನಾಗರಿಕರನ್ನಾಗಿ ಮಾಡುವ ಅರ್ಹತೆ ಇದೆಯೇ ಎಂಬುದಕ್ಕಾಗಿ ಈ ನಿಯಮಗಳಿವೆ. ಸಮಾಜ ದೃಷ್ಟಿಯಿಂದ ಈ ನಿಯಮಗಳು ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ ಅವಶ್ಯವಾಗಿದೆ. ದತ್ತು ನೀಡುವ ಮತ್ತು ಪಡೆದುಕೊಳ್ಳುವಲ್ಲಿ ಹಲವಾರು ನಿಯಮಗಳು, ಕಾನೂನಿನ ಚೌಕಟ್ಟುಗಳಿವೆ. ಅವುಗಳನ್ನು ಪರಿಪಾಲಿಸುವದು ಅನಿವಾರ್ಯ.

– ಎಚ್.ಕೆ. ಪಾಟೀಲ.

ಸಚಿವರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೈದ್ಯ ಡಾ. ಎಸ್.ಬಿ. ಶೆಟ್ಟರ ಮಾತನಾಡಿ, ಇದೊಂದು ಮನ ಕಲಕುವ, ಮನಕ್ಕೆ ಮುದ ನೀಡುವ ಕಾರ್ಯಕ್ರಮವಾಗಿದೆ. ಈ ಸಂಸ್ಥೆ ನಿಷ್ಕಾಮವಾಗಿ ಕೆಲಸ ಮಾಡುತ್ತಿದೆ. ಈ ಸೇವೆಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇರುವುದಿಲ್ಲ. ಸಮಾಜದ ಸಮಸ್ಯೆಗೆ ಉತ್ತರವು ಹೌದು, ಮಗು ಅನಾಥವಾಗಬಾರದು ಅಂತಹ ಮಗುವಿಗೆ ಸೂರು ಕಲ್ಪಿಸುವದು ಸಮಾಜದ ಜವಾಬ್ದಾರಿಯೂ ಹೌದು. ಇಂತಹ ಅಮೂಲ್ಯ ಸೇವೆಗೆ ಮುಂದಾಗಿರುವ ಸೇವಾ ಭಾರತಿ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು.


Spread the love

LEAVE A REPLY

Please enter your comment!
Please enter your name here