ಈ ಸರ್ಕಾರ ಉಳಿಯುವ ಗ್ಯಾರಂಟಿಯಿಲ್ಲ: ಮಾಜಿ ಸಚಿವ ಬಿ.ಶ್ರೀರಾಮುಲು

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಾಂಗ್ರೆಸ್ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ರಾಜ್ಯದ ಜನತೆ ಈ ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ದಿನಕ್ಕೊಂದು ಹೇಳಿಕೆ ನೀಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದು, ಮುಂದೆ ಈ ಸರ್ಕಾರ ಉಳಿಯುವುದು ಗ್ಯಾರಂಟಿ ಇಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಭವಿಷ್ಯ ನುಡಿದರು.

Advertisement

ಅವರು ಪಟ್ಟಣಕ್ಕೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ. ಸರ್ಕಾರದ ಸಚಿವರು, ಶಾಸಕರೇ ತಮ್ಮ ಅಸಮಾಧಾನವನ್ನು ತೋಡಿಕೊಳ್ಳುತ್ತಿದ್ದಾರೆ. ಕೆಲವು ಮಂತ್ರಿಗಳು ನವೆಂಬರ್ ಕ್ರಾಂತಿ ಎಂದು ಹೇಳುತ್ತಿದ್ದಾರೆ. ಸಿಎಂ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎನ್ನುತ್ತಿದ್ದವರು, ಇದೀಗ ಹೈಕಮಾಂಡ್ ಹೇಳಿದಂತೆ ಎನ್ನುತ್ತಿದ್ದಾರೆ. ಡಿಸಿಎಂ ಡಿಕೆಶಿ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನಗಳ ಬದಲಾವಣೆ ಎನ್ನುತ್ತಿದ್ದು, ಸರ್ಕಾರಕ್ಕೆ ಯಾರು ಕಪ್ಪು ಹಣವನ್ನು ಕೊಡುತ್ತಾರೋ ಅವರನ್ನು ಮಾತ್ರ ಉಳಿಸುವ ಪ್ರಯತ್ನ ನಡೆಯುತ್ತಿದೆ. ಇನ್ನುಳಿದವರಿಗೆ ಗೇಟ್ ಪಾಸ್ ನೀಡುತ್ತಿದ್ದಾರೆ. ಸರ್ಕಾರ ಐಪಿಎಲ್ ಬೆಟ್ಟಿಂಗ್‌ನಂತಾಗಿದೆ ಎಂದು ಲೇವಡಿ ಮಾಡಿದರು.

ದೇಶದಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿ ನಡೆಯುತ್ತಿದೆ. ಶ್ರೀ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದ್ದು, ನಿಗಮದ ಹಣವನ್ನು ತೆಲಂಗಾಣಕ್ಕೆ ಕಳಿಸಿದ್ದಾರೆ. ಇದಕ್ಕೆಲ್ಲ ನೇರ ಹೊಣೆ ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಎಂದಂತೆ ಶ್ರೀರಾಮುಲು ಅಕ್ರೋಶ ವ್ಯಕ್ತಪಡಿಸಿದರು. ಸುಮಾರು ನೂರು ವರ್ಷಗಳ ಕಾಲ ದೇಶದ ಸೇವೆ, ಜನರ ಸೇವೆಯನ್ನು ಮಾಡಿಕೊಂಡು ಬಂದಿರುವ ಆರ್.ಎಸ್.ಎಸ್‌ನ್ನು ಬ್ಯಾನ್ ಮಾಡುವದು ಯಾರಿಂದಲೂ ಸಾಧ್ಯವಿಲ್ಲ. ದೇಶಸೇವೆ, ಜನಸೇವೆಯನ್ನು ಮಾಡುವ, ದೇಶಭಕ್ತಿ ಬೆಳೆಸುವ ಸಂಘ ಇದಾಗಿದ್ದು, ಆರ್‌ಎಸ್‌ಎಸ್ ಏನಾದರೂ ತಪ್ಪು ಮಾಡಿದ್ದರೆ ತೋರಿಸಿ. ಆನಂತರ ಬ್ಯಾನ್ ಮಾಡುವ ವಿಚಾರ ಮಾಡಿ ಎಂದು ಸವಾಲು ಹಾಕಿದರು.

ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಕಾಪಿ ಹೊಡೆಯುತ್ತಿದೆ ಎನ್ನುವ ಕಾಂಗ್ರೆಸ್‌ನ ಆರೋಪಕ್ಕೆ ಪ್ರತ್ಯುತ್ತರ ನೀಡಿ, ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದೇವೆಯೇ ಹೊರತು ಸುಮ್ಮಸುಮ್ಮನೆ ಉದ್ಯೋಗ ಕೊಡುವುದಾಗಿ ಪೊಳ್ಳು ಭರವಸೆ ನೀಡುವುದಿಲ್ಲ. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿರುವ ಸರ್ಕಾರಗಳ ಕಥೆ ಏನಾಗಿದೆ ಎಂದು ಪ್ರಶ್ನಿಸಿದರಲ್ಲದೆ, ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತದಿಂದ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಶಾಸಕ ಡಾ. ಚಂದ್ರು ಲಮಾಣಿ, ಸುನೀಲ ಮಹಾಂತಶೆಟ್ಟರ, ಗಂಗಾಧರ ಮೆಣಸಿನಕಾಯಿ, ಭೀಮಣ್ಣ ಯಂಗಾಡಿ ಮುಂತಾದವರು ಇದ್ದರು.

ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿ, ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ. ನಾವು ಎಲ್ಲರೂ ಸೇರಿಕೊಂಡು ಬಿಜೆಪಿ ತೀರ್ಮಾನವನ್ನು ಒಪ್ಪುತ್ತೇವೆ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here