ಬೆಂಗಳೂರು: ಗ್ರಾಮ ಪಂಚಾಯತ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ ಮೊದಲ 15 ತಿಂಗಳ ಅವಧಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ. ಆದರೆ, 15 ತಿಂಗಳ ಬಳಿಕ ಯಾವುದೇ ಸಮಯದಲ್ಲಾದರೂ ಅವಿಶ್ವಾಸ ನಿರ್ಣಯ ಮಂಡಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚಲ್ಡಿಗಾನಹಳ್ಳಿಯ ಗ್ರಾಮಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಸದಸ್ಯರ ಮನವಿಯ ಮೇರೆಗೆ ಕೋಲಾರ ಉಪವಿಭಾಗಾಧಿಕಾರಿ ಸಭೆಗೆ ದಿನಾಂಕ ನಿಗದಿ ಮಾಡಿದ್ದರು. ಈ ಕ್ರಮ ಪ್ರಶ್ನಿಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎನ್. ಶ್ರೀನಿವಾಸ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಪೀಠ ವಿಚಾರಣೆ ನಡೆಸಿ, ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಪೀಠ ಹೇಳುವಂತೆ, ಗ್ರಾಮ ಪಂಚಾಯತ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ನಂತರದ ಆರಂಭಿಕ 15 ತಿಂಗಳ ಅವಧಿಯಲ್ಲಿ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಬಂಧವಿದೆ. ಅದರ ನಂತರ ಯಾವುದೇ ಸಂದರ್ಭದಲ್ಲಿ ನಿರ್ಣಯ ಮಂಡಿಸಬಹುದು.
ಅರ್ಜಿದಾರರ ಪರ ವಕೀಲರು, ಅಧ್ಯಕ್ಷರ ಅವಧಿಯ ಕೊನೆಯ ಹಂತದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಸದಸ್ಯರು ಮುಂದಾಗಿರುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದರು. ಆದರೆ, 15 ತಿಂಗಳ ಬಳಿಕ ಯಾವಾಗ ಬೇಕಾದರೂ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿದೆ ಎಂಬುದರಿಂದ ಆ ವಾದವನ್ನು ಪೀಠ ತಳ್ಳಿ ಹಾಕಿದೆ. ಅವಧಿಯ ಅಂತ್ಯದ ವೇಳೆಯಲ್ಲಿ ಅವಿಶ್ವಾಸ ಮಂಡಿಸಲು ಅವಕಾಶ ನೀಡುವುದರಿಂದ ಅಧಿಕಾರ ದುರುಪಯೋಗವಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದೇ ವೇಳೆ, ಉಪವಿಭಾಗಾಧಿಕಾರಿಗಳು ಸಭೆ ನಡೆಸಲು ದಿನಾಂಕ ನಿಗದಿ ಮಾಡಿರುವುದರಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಹಣಕಾಸಿನ ಅವ್ಯವಹಾರ ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ಪ್ರಾಧಿಕಾರ ಪರಿಶೀಲನೆ ನಡೆಸಬೇಕು. ಆದೇಶದ ಪ್ರತಿ ಸಿಕ್ಕ ಏಳು ದಿನಗಳೊಳಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯತ್‌ಗೆ ನಿರ್ದೇಶನ ನೀಡಲಾಗಿದೆ.



